ನೇರಳಕಟ್ಟೆಯಲ್ಲಿ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೇಂಜರ್ ರೈಲು ನಿಲುಗಡೆ
ಬಂಟ್ವಾಳ: ನೆಟ್ಲಮುಡ್ನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಅನುಕೂಲಕ್ಕಾಗಿ ನೇರಳಕಟ್ಟೆ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆಯಾಗಬೇಕೆನ್ನುವ ಬಹುಕಾಲದ ಕನಸು ಇದೀಗ ನನಸಾಗಿದೆ.
ಉದ್ಯೋಗ, ಶಿಕ್ಷಣ ಸಹಿತ ವಿವಿಧ ಅಗತ್ಯದ ಕೆಲಸಗಳಿಗೆ ಸಂಚರಿಸುವ ನಿಟ್ಟಿನಲ್ಲಿ ರೈಲನ್ನು ಅವಲಂಬಿಸಿದ್ದ ಸಾವಿರಾರು ಪ್ರಯಾಣಿಕರ ಮನವಿಗೆ ಸ್ಪಂದಿಸಿ ರೈಲ್ವೇ ಇಲಾಖೆ ನೇರಳಕಟ್ಟೆಯಲ್ಲು ನಿಲುಗಡೆಗೆ ಅವಕಾಶ ಕಲ್ಪಿಸಿರುವುದು ಈ ಭಾಗದ ಜನರಲ್ಲಿ ಸಂತಸ ತಂದಿದೆ.
ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ, ಈ ವಿಚಾರದಲ್ಲಿ ವಿಶೇಷ ಮುತುವರ್ಜಿ ವಹಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ರೈಲ್ವೇ ಇಲಾಖೆಯಲ್ಲಿ ಮುಖ್ಯ ಟಿಕೆಟ್ ನಿರೀಕ್ಷಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಠಲ್ ನಾಯ್ಕ್, ನೆಟ್ಲಮುಡ್ನೂರು ಗ್ರಾಮಪಂಚಾಯತ್ ಸದಸ್ಯ ಅಶೋಕ್ ರೈ ಎಲ್ಕಾಜೆ ಮತ್ತು ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರು ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಿದ್ದಾರೆ.
ರೈಲು ನಿಲುಗಡೆಗೆ ಅಗತ್ಯವಿರುವ ಸಮಯನಿಗದಿ, ಭದ್ರತೆ ಹಾಗೂ ಕಾರ್ಯಾಚರಣಾ ವ್ಯವಸ್ಥೆಗಳನ್ನು ಇಲಾಖೆ ರೂಪಿಸಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೆಟ್ಲಮುಡ್ನೂರಿನಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆಯಿಂದಾಗಿ ನೆಟ್ಲಮುಡ್ನೂರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.