ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರ-ವಾರ್ಷಿಕ ಮಹೋತ್ಸವದ ಎರಡನೇ ದಿನ 40,000 ಭಕ್ತರ ಭೇಟಿ: ಮಕ್ಕಳಿಗಾಗಿ ವಿಶೇಷ ಬಲಿಪೂಜೆ

ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರ-ವಾರ್ಷಿಕ ಮಹೋತ್ಸವದ ಎರಡನೇ ದಿನ 40,000 ಭಕ್ತರ ಭೇಟಿ: ಮಕ್ಕಳಿಗಾಗಿ ವಿಶೇಷ ಬಲಿಪೂಜೆ


ಮಂಗಳೂರು: ಇಲ್ಲಿನ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇ ದಿನವು ಭಕ್ತಾದಿಗಳ ಅಭೂತಪೂರ್ವ ಸ್ಪಂದನೆಗೆ ಸಾಕ್ಷಿಯಾಯಿತು. ದಿನವಿಡೀ ಸುಮಾರು 40,000ಕ್ಕೂ ಹೆಚ್ಚು ಭಕ್ತರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ, ಬಾಲ ಯೇಸುವಿನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರಿಗಾಗಿ ಕೊಂಕಣಿ ಮತ್ತು ಮಲಯಾಳಂ ಭಾಷೆಗಳಲ್ಲಿ ಒಟ್ಟು ಐದು ಪವಿತ್ರ ಬಲಿಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ದಿನದ ಪ್ರಮುಖ ಆಕರ್ಷಣೆಯಾಗಿ ಬೆಳಗ್ಗೆ 10 ಗಂಟೆಗೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ. ಡಾ. ದುಮಿಂಗ್ ಡಾಯಸ್ ಅವರ ನೇತೃತ್ವದಲ್ಲಿ ಮಕ್ಕಳಿಗಾಗಿ ವಿಶೇಷ ಸಾಂಭ್ರಮಿಕ ಬಲಿಪೂಜೆ ನಡೆಯಿತು. ಈ ಸಂಪೂರ್ಣ ಪೂಜಾ ವಿಧಿಯನ್ನು ಮಕ್ಕಳೇ ಸಂಘಟಿಸಿ, ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.

ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂದೂರಿನ ಸಂತ ಸೆಬಾಸ್ಟಿಯನ್ ಚರ್ಚ್‌ನ ಮಕ್ಕಳ ಬ್ರಾಸ್ ಬ್ಯಾಂಡ್ ಪೂಜಾ ಮೆರವಣಿಗೆಯನ್ನು ಅಲಂಕರಿಸಿತು. ಮಕ್ಕಳ ಗಾಯನ ಮಂಡಳಿಯು ಸುಶ್ರಾವ್ಯವಾಗಿ ಹಾಡುವ ಮೂಲಕ ಭಕ್ತಿ ಸುಧೆ ಹರಿಸಿತು. ವಾಚನಗಳು ಹಾಗೂ ಪ್ರಾರ್ಥನಾ ವಿಧಿಗಳನ್ನು ಮಕ್ಕಳೇ ಅರ್ಥಪೂರ್ಣವಾಗಿ ನಿರ್ವಹಿಸಿದರು.

ತಮ್ಮ ಪ್ರಬೋಧನೆಯಲ್ಲಿ ಬಿಷಪ್ ದುಮಿಂಗ್ ಡಾಯಸ್ ಅವರು, ‘ಪೋಷಕರು ತಮ್ಮ ಮಕ್ಕಳ ಕ್ರೈಸ್ತ ನಂಬಿಕೆಯ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿಮ್ಮ ಮಕ್ಕಳು ಪೋಷಕರಿಗೆ ವಿಧೇಯರಾಗಿ, ಜ್ಞಾನ ಮತ್ತು ಕೃಪೆಯಲ್ಲಿ ಬೆಳೆದ ಬಾಲ ಯೇಸುವಿನಂತೆ ಬೆಳೆಯಲಿ. ಮಕ್ಕಳು ದಾರಿ ತಪ್ಪಿದಾಗ ಪ್ರೀತಿ ಮತ್ತು ತಾಳ್ಮೆಯಿಂದ ಅವರನ್ನು ಮುನ್ನಡೆಸುವ ಉತ್ತಮ ಕುರುಬರಾಗಿರಿ’ ಎಂದು ಕರೆ ನೀಡಿದರು. 

ಇದೇ ಸಂದರ್ಭದಲ್ಲಿ ಅವರು ಕಾರ್ಮೆಲೈಟ್ ಗುರುಗಳ ಆಧ್ಯಾತ್ಮಿಕ ಸೇವೆಯನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಪುಣ್ಯಕ್ಷೇತ್ರವು ಆಯೋಜಿಸಿದ್ದ ಬಾಲ ಯೇಸುವಿನ ಭಾವಚಿತ್ರ ಬಿಡಿಸುವ ಸ್ಪರ್ಧೆ, ಕ್ರಿಸ್‌ಮಸ್ ಫ್ಯಾಮಿಲಿ ಪೋಸ್ಟರ್ ಸ್ಪರ್ಧೆ ಹಾಗೂ ಕ್ರಿಯೇಟಿವ್ ಸ್ಟಾರ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ದಿನದ ಮೊದಲ ಬಲಿಪೂಜೆಯನ್ನು ಮೈಸೂರಿನ ವಂ. ವಿಲ್‌ಫ್ರೆಡ್ ರೊಡ್ರಿಗಸ್ ಹಾಗೂ ಎರಡನೇ ಪೂಜೆಯನ್ನು ಬೆಂಗಳೂರಿನ ವಂ. ಕ್ಲಿಫರ್ಡ್ ರೊಡ್ರಿಗಸ್ ನೆರವೇರಿಸಿದರು. ಮಧ್ಯಾಹ್ನ 1 ಗಂಟೆಯ ಮಲಯಾಳಂ ಬಲಿಪೂಜೆಯಲ್ಲೂ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಬಂದಂತಹ ಎಲ್ಲಾ ಭಕ್ತಾದಿಗಳಿಗೆ ‘ಅನ್ನಸಂತರ್ಪಣೆ’ಯ ವ್ಯವಸ್ಥೆ ಮಾಡಲಾಗಿತ್ತು.

ಬಿಷಪ್ ಡಾ. ದುಮಿಂಗ್ ಡಾಯಸ್ ಅವರು ಪುಣ್ಯಕ್ಷೇತ್ರಕ್ಕೆ ನೀಡಿದ ಚೊಚ್ಚಲ ಭೇಟಿಯ ಸ್ಮರಣಾರ್ಥವಾಗಿ, ಸಂತ ಜೋಸೆಫ್ ಆಶ್ರಮದ ಸುಪೀರಿಯರ್ ವಂ. ಮೆಲ್ವಿನ್ ಡಿ’ಕುನ್ಹಾ ಅವರು ಬಿಷಪರಿಗೆ ಬಾಲ ಯೇಸುವಿನ ಪ್ರತಿಮೆಯನ್ನು ನೀಡಿ ಗೌರವಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article