ಸಂಸದ ಕ್ಯಾ. ಚೌಟ, ಶಾಸಕ ರಾಜೇಶ್ ನಾಯ್ಕ್ ಜಂಟಿ ನೇತೃತ್ವದಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ
ಬಂಟ್ವಾಳ ಪುರಸಭೆಯ ಕನಿಷ್ಠ ವೇತನದಡಿ ಮತ್ತು ಹೊರಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸಕಾಲದಲ್ಲಿ ವೇತನ ಪಾವತಿಯಾಗದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಅವರ ಜೀವನ ನಿರ್ವಹಣೆ ಕಷ್ಟವಾಗಿರುವ ಬಗ್ಗೆ ನೌಕರರು ಸಂಸದರ ಹಾಗೂ ಶಾಸಕರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ನೌಕರರ ವೇತನ ಬಾಕಿಯನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸೂಚನೆ ನೀಡಿದ್ದಾರೆ.
ಅಲ್ಲದೆ, ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಅನುದಾನ ಮಂಜೂರಾಗಿ ವರ್ಷ ಕಳೆದರೂ ಕಾಮಗಾರಿ ನಡೆಯದೆ ನೇತ್ರಾವತಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆಯೂ ಮಹತ್ವದ ಚರ್ಚೆ ನಡೆಯಿತು. ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡ ನೇತ್ರಾವತಿಯ ಸಂಸ್ಕರಿಸದ ಕೊಳಚೆ ನೀರು ಮತ್ತು ತ್ಯಾಜ್ಯ ನದಿಗೆ ಹರಿಯುತ್ತಲೇ ಇದೆ. ಇದು ನೀರಿನ ಮಾಲಿನ್ಯ ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಭೀತಿಯನ್ನು ಹೆಚ್ಚಿಸಿದೆ. ಹೀಗಾಗಿ ಈ ಕುರಿತು ಜಿಲ್ಲಾಡಳಿತವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಯುಜಿಡಿ ಯೋಜನೆ ಕಾರ್ಯಗತಗೊಳಿಸಲು ಹಾಗೂ ತ್ಯಾಜ್ಯ ನೀರು ನದಿಯೊಡಳಿಗೆ ಸೇರದೆ ನೇತ್ರಾವತಿಯ ಪಾವಿತ್ರ್ಯತೆಯನ್ನು ಕಾಪಾಡುವಂತೆ ಸಂಸದರು ಹಾಗೂ ಶಾಸಕರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.