ಎಲೆಚುಕ್ಕಿ ರೋಗದಿಂದ ಅಡಿಕೆ ಕೃಷಿ ಸಂಪೂರ್ಣ ನಾಶ-ಕೃಷಿಕರ ಸಾಲ ಮನ್ನಾ ಮಾಡಿ: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪದಾಧಿಕಾರಿಗಳ ಒತ್ತಾಯ
ಸುಳ್ಯ: ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದ್ದು ಸುಳ್ಯ ತಾಲೂಕಿನ ಬಹುತೇಕ ತೋಟಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿ ಕೃಷಿ ನಾಶವಾಗಿದ್ದು ಅಡಿಕೆ ಕೃಷಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದುದರಿಂದ ಅಡಿಕೆ ಕೃಷಿಕರ ಸಾಲ ಮನ್ನಾ ಮಾಡುವುದು ಸೇರಿದಂತೆ ನೆರವನ್ನು ಸರಕಾರ ನೀಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸುಳ್ಯ ಘಟಕದ ಪದಾಧಿಕಾರಿಗಳು ಹೇಳಿದ್ದಾರೆ.
ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಡಿಕೆ ಬೆಳೆಗಾರರ ಸಂಘದ ಸುಳ್ಯ ಘಟಕದ ಸಂಚಾಲಕ ಎಂ.ಡಿ. ವಿಜಯಕುಮಾರ್ ಮಾತನಾಡಿ, ಹಳದಿ ರೋಗ ಭಾದೆ, ಎಲೆಚುಕ್ಕಿ ರೋಗದಿಂದ ವ್ಯಾಪಕವಾಗಿ ಅಡಿಕೆ ಕೃಷಿ ನಾಶ ಉಂಟಾಗಿದ್ದು ಅಡಿಕೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದುರಿಂದ ಕೃಷಿಕರು ಪಡೆದ ಶೂನ್ಯ ಬಡ್ಡಿಯ ಕೃಷಿ ಸಾಲ ಮನ್ನಾ ಮಾಡಬೇಕು, ದೀರ್ಘಾವಧಿ ಸಾಲದ ಶೇ.೩ ಬಡ್ಡಿ ಮನ್ನಾ ಮಾಡಬೇಕು ಮತ್ತು ಸಾಲ ಮರುಪಾವತಿ ಮಾಡುವುದನ್ನು ಎರಡು ವರ್ಷಗಳ ಕಾಲ ಸ್ಥಗಿತ ಮಾಡಬೇಕು.ಈ ಬೇಡಿಕೆಯನ್ನು ಮುಂದಿಟ್ಟು ಜನಪ್ರತಿನಿಧಿಗಳು, ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಎಲೆ ಚುಕ್ಕಿ ರೋಗದ ಸಮೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸುಳ್ಯ ತಾಲೂಕು ಅಡಿಕೆ ಕೃಷಿ ಪ್ರಧಾನವಾದ ತಾಲೂಕಾಗಿದ್ದು ಶೇ.80 ಅಡಿಕೆ ಬೆಳೆಗಾರರನ್ನು ಹೊಂದಿದೆ. ಶತಮಾನದಿಂದ ಅಡಿಕೆ ಬೆಳೆ ಈ ಭಾಗದ ರೈತರ ಜೀವನಾಡಿಯಾಗಿರುವ ಬೆಳೆ ಇತ್ತೀಚಿನ ವರ್ಷಗಳಲ್ಲಿ ‘ಎಲೆಚುಕ್ಕಿ’ ಎಂಬ ಮಹಾರೋಗ ಅಡಿಕೆಗೆ ಭಾದಿಸಿ ನಮ್ಮ ತಾಲೂಕಿನ ಅಡಿಕೆ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಅಡಿಕೆ ಫಸಲು ನಷ್ಟದ ಜೊತೆಗೆ ಅಡಿಕೆ ತೋಟಗಳೇ ನಾಶವಾಗುತ್ತಿದೆ. ಈ ಹಿನ್ನಲೆಯಲ್ಲಿ ಸಂಘದ ಸುಳ್ಯ ಘಟಕದ ವತಿಯಿಂದ ಇತ್ತೀಚೆಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅಡಿಕೆ ಬೆಳೆಯ ಮತ್ತು ಬೆಳೆಗಾರರ ಶೋಚನೀಯ ಸ್ಥಿತಿಯ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಯಿತು. ಇದರಿಂದ ಉಂಟಾದ ಆರ್ಥಿಕ ಹೊಡೆತವನ್ನು ನಿಭಾಯಿಸುವ ಬಗ್ಗೆ ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪ್ರಮುಖ ಬೇಡಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ತಾಲೂಕಿನ ವಿವಿಧ ಪಕ್ಷದ ರಾಜಕೀಯ ಮುಖಂಡರುಗಳ ನೆರವು ಪಡೆದು ಸಂಘದ ನಿಯೋಗದೊಂದಿಗೆ ಜನಪ್ರತಿನಿಧಿಗಳು, ಸಚಿವರು, ಸಂಸದರರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ತಾಲೂಕಿನ ‘ಎಲೆಚುಕ್ಕಿ’ ಭಾದಿತ ರೈತರ ಸಮೀಕ್ಷೆಯನ್ನು ಕೈಗೊಂಡು ಆ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಸಹಕಾರ ಸಂಘಗಳ ಮುಖಾಂತರ ಸಮೀಕ್ಷೆ ಅರ್ಜಿಗಳನ್ನು ವಿತರಿಸಿ, ರೈತರಿಂದ ಮಾಹಿತಿ ಪಡೆದುಕೊಳ್ಳಲಾಗುವುದು.
ಆದ್ದರಿಂದ ತಾಲೂಕಿನ ಎಲೆಚುಕ್ಕಿರೋಗ ಭಾದಿತ ಕೃಷಿಕರು ಸಮೀಕ್ಷಾ ಅರ್ಜಿಯನ್ನು ತಮ್ಮ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ನಿಗದಿತ ಶುಲ್ಕ ನೀಡಿ ಅರ್ಜಿ ಪಡೆದುಕೊಂಡು ಮಾಹಿತಿ ದಾಖಲಿಸಿ, ಪುನಃ ಸಹಕಾರಿ ಸಂಘದಲ್ಲಿ ನೀಡಬೇಕಾಗಿದೆ. ಅವುಗಳನ್ನು ಶೇಖರಿಸಿ, ಸರಕಾರಕ್ಕೆ ಸಲ್ಲಿಸಲಾಗುವುದು. ಸ್ವ ಇಚ್ಚೆಯಿಂದ ಎಲೆಚುಕ್ಕಿ ಭಾದಿತ ರೈತರು ಜ.31ರ ಮುಂಚಿತವಾಗಿ ತಮ್ಮ ಅರ್ಜಿಗಳನ್ನು ನೀಡಿ ಸಹಕರಿಸುವಂತೆ ಅವರು ವಿನಂತಿಸಿದರು.
ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹೆಚ್.ಬಿ.ಜಯರಾಮ ಹಾಡಿಕಲ್ಲು, ಸಂಘದ ಸದಸ್ಯರಾದ ಹಿರಿಯ ಸಹಕಾರಿ ಜಾಕೆ ಮಾಧವ ಗೌಡ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿದರು.