ಮಂಗಳೂರು ದಕ್ಕೆಯಲ್ಲಿ ಕಾರ್ಮಿಕ ಮುರುಗನ್ ಅವರ ದುರ್ಮರಣ: ವ್ಯವಸ್ಥಾತ್ಮಕ ನಿರ್ಲಕ್ಷ್ಯದ ವಿರುದ್ಧ ತುರ್ತು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ CITU ಮನವಿ
ದಕ್ಕೆಯಲ್ಲಿ ದುಡಿಯುವ ಕಾರ್ಮಿಕರು ವರ್ಷಗಳಿಂದ ಸುರಕ್ಷತಾ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ, ಉತ್ಪಾದನಾ ಪ್ರಕ್ರಿಯೆ ನಿರಂತರವಾಗಿರಬೇಕು ಎಂಬ ಒತ್ತಡ ಮಾತ್ರ ಉಳಿದು, ಕಾರ್ಮಿಕರ ಜೀವ ಮತ್ತು ಅವರ ಭದ್ರತೆ ಕಡೆಗಣಿಸಲ್ಪಟ್ಟಿದೆ. ಶ್ರಮದ ಮೇಲೆ ನಿಂತಿರುವ ಈ ಕ್ಷೇತ್ರದಲ್ಲಿ ಶ್ರಮಜೀವಿಗಳ ಜೀವಕ್ಕೆ ರಕ್ಷಣೆಯೇ ಇಲ್ಲದಿರುವುದು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲ, ಸಾಮಾಜಿಕ ಅನ್ಯಾಯವೂ ಹೌದು.
ಮುರುಗನ್ ಅವರು ಮೀನು ಹೊತ್ತು ಬಂದು ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕಂಬ ಕುಸಿದು ತಲೆಗೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿರುವುದು, ಕಾರ್ಮಿಕರ ದುಡಿಯುವ ಪರಿಸ್ಥಿತಿಗಳು ಎಷ್ಟು ಅಸುರಕ್ಷಿತವಾಗಿವೆ ಎಂಬುದಕ್ಕೆ ಮತ್ತೋಮದು ಸ್ಪಷ್ಟ ಉದಾಹರಣೆಯಾಗಿದೆ. ಉತ್ಪಾದನಾ ಸಾಧನಗಳು ಮತ್ತು ಮೂಲಸೌಕರ್ಯಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದಾಗ ಅದರ ಬೆಲೆಯನ್ನು ಕಾರ್ಮಿಕ ವರ್ಗ ತನ್ನ ಪ್ರಾಣವನ್ನು ಮುಡಿಪಾಗಿಡಬೇಕಾದಂತಹ ಪರಿಸ್ಥಿತಿ ಮತ್ತೆ ಮತ್ತೆ ಎದುರಾಗುತ್ತಿದೆ ಎಂಬುದು ಈ ದುರಂತದಿಂದ ಸ್ಪಷ್ಟವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
1. ಮೃತ ಕಾರ್ಮಿಕ ಮುರುಗನ್ ಅವರ ಕುಟುಂಬಕ್ಕೆ ಕನಿಷ್ಠ ₹25 ಲಕ್ಷ ಪರಿಹಾರವನ್ನು ತಕ್ಷಣ ಮಂಜೂರು ಮಾಡಬೇಕು.
2. ಮಂಗಳೂರು ಧಕ್ಕೆಯ ಸಮಗ್ರ ಸುರಕ್ಷತಾ ಮತ್ತು ಮೂಲಸೌಕರ್ಯ ಪರಿಶೀಲನೆ ನಡೆಸಿ, ಅಪಾಯಕಾರಿ ಲೈಟ್ ಕಂಬಗಳು ಸೇರಿದಂತೆ ಎಲ್ಲಾ ಹಳೆಯ ವ್ಯವಸ್ಥೆಯನ್ನು ತಕ್ಷಣ ಬದಲಾಯಿಸಬೇಕು.
3. ಸಂಬಂಧಿತ ಇಲಾಖೆಯ ನಿರ್ಲಕ್ಷ್ಯಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
4. ಧಕ್ಕೆಯಲ್ಲಿ ದುಡಿಯುವ ಎಲ್ಲಾ ಅಸಂಘಟಿತ ಕಾರ್ಮಿಕರ ಕಡ್ಡಾಯ ನೋಂದಣಿ, ವಿಮೆ, ಸುರಕ್ಷತಾ ಸಾಧನಗಳು ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೆ ತರಬೇಕು.
5. ಕಾರ್ಮಿಕ ಪ್ರತಿನಿಧಿಗಳನ್ನು ಒಳಗೊಂಡ ಸಂಯುಕ್ತ ಸುರಕ್ಷತಾ ಸಮಿತಿಯನ್ನು ರಚಿಸಿ, ನಿರಂತರ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸಬೇಕು.
6. ಧಕ್ಕೆಯಲ್ಲಿ ದುಡಿಯುವ ಎಲ್ಲಾ ಅಸಂಘಟಿತ ಕಾರ್ಮಿಕರ ಕಡ್ಡಾಯ ನೋಂದಣಿ, ವಿಮೆ, ಸುರಕ್ಷತಾ ಸಾಧನಗಳು ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೆ ತರಬೇಕು.
7. ಕಾರ್ಮಿಕ ಪ್ರತಿನಿಧಿಗಳನ್ನು ಒಳಗೊಂಡ ಸಂಯುಕ್ತ ಸುರಕ್ಷತಾ ಸಮಿತಿಯನ್ನು ರಚಿಸಿ, ನಿರಂತರ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಯಿತು.
ಕಾರ್ಮಿಕರ ಶ್ರಮವೇ ಆರ್ಥಿಕ ಚಟುವಟಿಕೆಗಳ ಅಸ್ತಿತ್ವ. ಆ ಶ್ರಮವನ್ನು ನಿರ್ಲಕ್ಷಿಸುವ ವ್ಯವಸ್ಥೆ ಮಾನವೀಯತೆಯನ್ನೇ ನಿರಾಕರಿಸುವಂತಾಗಿದೆ. ಇಂತಹ ದುರಂತಗಳು ಮತ್ತೆಂದೂ ಮರುಕಳಿಸದಂತೆ ತಕ್ಷಣ ದೃಢವಾದ ಕ್ರಮ ಕೈಗೊಳ್ಳುವುದು ಜಿಲ್ಲಾಡಳಿತದ ನೈತಿಕ ಹಾಗೂ ಕಾನೂನುಬದ್ಧ ಜವಾಬ್ದಾರಿಯಾಗಿರುವುದರಿಂದ ಶೀಘ್ರವಾಗಿ ಕಾನೂನು ಕ್ರಮ ಜರುಗಿಸಿ ಪರಿಹಾರ ಒದಗಿಸಬೇಕೆಂದು CITU ದ.ಕ.ಜಿಲ್ಲಾ ಸಮಿತಿಯು ಒತ್ತಾಯಿಸಿದೆ.
ನಿಯೋಗದಲ್ಲಿ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರು,DYFI ಜಿಲ್ಲಾ ನಾಯಕರಾದ ತಯ್ಯುಬ್ ಬೆಂಗರೆ,ಪಿ ಜಿ ರಫೀಕ್ ಅವರು ಹಾಜರಿದ್ದರು.