ಪರಿಹಾರ ನೀಡದೆ ಸ್ಟೆರ್‌ಲೈಟ್ ಕಂಪೆನಿಯಿಂದ ಕಾಮಗಾರಿ:   ರೈತರಿಂದ ವಿರೋಧ

ಪರಿಹಾರ ನೀಡದೆ ಸ್ಟೆರ್‌ಲೈಟ್ ಕಂಪೆನಿಯಿಂದ ಕಾಮಗಾರಿ: ರೈತರಿಂದ ವಿರೋಧ


ಮೂಡುಬಿದಿರೆ: ಸ್ಟೆರ್‌ಲೈಟ್ ಕಂಪೆನಿಯು ಯಾವುದೇ ಪರಿಹಾರ ನೀಡದೆ ತೆಂಕಮಿಜಾರು ಗ್ರಾಮದ ಪಡೀಲು ಕೊಂನ್ನೆರಬೆಟ್ಟು ಪ್ರದೇಶದಲ್ಲಿ ಟವರ್ ನಿರ್ಮಾಣದ ಕಾಮಗಾರಿಗೆ ಮುಂದಾದ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.


ಬೂಬ ಗೌಡ, ಅಪ್ಪಯ್ಯ ಗೌಡ, ಮೋನಪ್ಪ ಹಾಗೂ ಸುಂದರ ಶೆಟ್ಟಿ ಅವರ ಜಾಗದಲ್ಲಿ ಟವರ್ ನಿರ್ಮಾಣಕ್ಕೆ ಪೂರಕವಾದ ಕಾಮಗಾರಿಯನ್ನು ಕೈಗೊಳ್ಳಲು ಕಂಪೆನಿ ಮೊದಲು ಮರಗಳ ಸಮೀಕ್ಷೆ ನಡೆಸಿತ್ತು. ಇದೇ ಪ್ರದೇಶದಲ್ಲಿ ಈಗಾಗಲೇ ಟವರ್ ನಿರ್ಮಾಣಗೊಂಡಿದ್ದು, ಅದಕ್ಕೆ ಸಂಪರ್ಕವಾಗಿ ವಿದ್ಯುತ್ ತಂತಿ ಎಳೆಯುವ ಉದ್ದೇಶದಿಂದ ಈ ನಾಲ್ವರು ಸಂತ್ರಸ್ತರ ಜಾಗದಲ್ಲಿ ಕೆಲವು ಮರಗಳನ್ನು ಕಡಿಸಲು ಕಂಪೆನಿ ಮುಂದಾಗಿದೆ.


ಕಂಪೆನಿ ಅಧಿಕಾರಿಗಳಿಗೆ ಮರಗಳ ಮೌಲ್ಯ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಸೂಕ್ತ ಪರಿಹಾರಧನವನ್ನು ಒದಗಿಸಿದ ಬಳಿಕವೇ ಕಾಮಗಾರಿ ನಡೆಸಲು ಅವಕಾಶ ನೀಡುವುದಾಗಿ ಸಂತ್ರಸ್ತರು ತಿಳಿಸಿದ್ದರು. ಆದರೆ ಕಂಪೆನಿ ಯಾವುದೇ ದಾಖಲೆ ಅಥವಾ ಪರಿಹಾರ ನೀಡದೇ ಪೊಲೀಸ್ ಪಡೆಯೊಂದಿಗೆ ಸೋಮವಾರ ಕಾಮಗಾರಿ ಆರಂಭಿಸಲು ಮುಂದಾದ ಹಿನ್ನೆಲೆಯಲ್ಲಿ ರೈತರು ಹಾಗೂ ಸಂತ್ರಸ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು.


ಸೂಕ್ತ ದಾಖಲೆಗಳು ಹಾಗೂ ಪರಿಹಾರ ನೀಡದೇ ಕಾಮಗಾರಿ ನಡೆಸಲು ಮುಂದಾದ ಕಂಪೆನಿ ಮತ್ತು ಅವರಿಗೆ ರಕ್ಷಣೆಯಾಗಿ ಬಂದ ಪೊಲೀಸ್ ಇಲಾಖೆಯ ಕ್ರಮವನ್ನು ರೈತ ಮುಖಂಡ, ವಕೀಲ ಶಾಂತಿಪ್ರಸಾದ್ ಹೆಗ್ಡೆ ತರಾಟೆಗೆ ತೆಗೆದುಕೊಂಡರು.


ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಂಪೆನಿ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಸಹಾಯಕ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ. ಕಾನೂನುಬದ್ಧವಾಗಿ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರಧನವನ್ನು ಒದಗಿಸಿದ ಬಳಿಕವೇ ಕಾಮಗಾರಿ ಆರಂಭಿಸಬೇಕು ಎಂದು ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ. ಇಲ್ಲದಿದ್ದರೆ ಸಂತ್ರಸ್ತರು ನೇರವಾಗಿ ದೂರು ಸಲ್ಲಿಸಬಹುದೆಂದೂ ತಿಳಿಸಿದ್ದಾರೆ. ಆದರೂ ಕಂಪೆನಿ ಪೊಲೀಸ್ ಇಲಾಖೆಯ ನೆರವಿನಿಂದ ದಬ್ಬಾಳಿಕೆಗೆ ಮುಂದಾಗುತ್ತಿದೆ ಎಂದು ಆರೋಪಿಸಿದರು.

ಸಂತ್ರಸ್ತರು ಕೇಳಿದ ದಾಖಲೆಗಳು ಹಾಗೂ ಸೂಕ್ತ ಪರಿಹಾರವನ್ನು ನೀಡಿದಲ್ಲಿ ತಮ್ಮ ಜಾಗದಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡುವುದಾಗಿ ಅವರು ತಿಳಿಸಿದ್ದಾರೆ.

ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ಕಿಸಾನ್ ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ನೇಮಿರಾಜ್ ಶೆಟ್ಟಿ, ಗ್ರಾಮದ ಕಿಸಾನ್ ಅಧ್ಯಕ್ಷ ಹೊನ್ನಪ್ಪ ಗೌಡ, ಸಂಜೀವ ಗೌಡ, ಕಿಸಾನ್ ಪ್ರಮುಖರಾದ ಶಿವಕುಮಾರ್, ಪಡೀಲು ಕಿಸಾನ್ ಕಾರ್ಮಿಕ ಪ್ರಮುಖ ನೀತ ಗೌಡ ಇತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article