ಖ್ಯಾತ ಗಾಯಕ ಗಣೇಶ್ ಗಂಗೊಳ್ಳಿ ನಿಧನ
ಸೋಮವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸಂಗೀತ ಹಾಡಿದ್ದರು. ಮಂಗಳವಾರ ಬೆಳಗ್ಗೆ ಉಡುಪಿಗೆ ಹೋಗುವ ತಯಾರಿಯಲ್ಲಿದ್ದಾಗ ಕುಸಿದು ಬಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಸುಮಾರು 11.45 ರ ವೇಳೆಗೆ ಕೊನೆಯುಸಿರೆಳೆದರು.
ಆಕಾಶವಾಣಿ ಕಲಾವಿದರಾಗಿದ್ದ ಗಣೇಶ್ ಗಂಗೊಳ್ಳಿ ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಸಾಹಿತ್ಯ ಸಮ್ಮೇಳನಗಳಲ್ಲಿ ನಾಡ ಗೀತೆ, ಕುಂದಾಪ್ರ ಕನ್ನಡ ಗೀತೆಗಳನ್ನು ಹಾಡುತ್ತಿದ್ದರು. ಭಾವಗೀತೆ, ಜಾನಪದ ಗೀತೆಗಳನ್ನು ಇವರ ಕಂಠದಲ್ಲಿ ಕೇಳುವುದೇ ಒಂದು ವಿಶೇಷ ಅನುಭವ.
ಗಣೇಶ್ ಗಂಗೊಳ್ಳಿ ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾಗಿ ಉತ್ತಮ ಸಂಘಟಕರಾಗಿದ್ದರು. ಜಿಲ್ಲೆಯಾದ್ಯಂತ ಹಿರಿ-ಕಿರಿ ಜಾನಪದ ಕಲಾವಿದರನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ್ದರು. ಸಧ್ಯದಲ್ಲೇ ಉಡುಪಿಯಲ್ಲಿ ರಾಜ್ಯಮಟ್ಟದ ಜಾನಪದ ಸಮ್ಮೇಳನವೊಂದನ್ನು ನಡೆಸುವ ಬಗ್ಗೆ ತಯಾರಿ ನಡೆಸಿದ್ದರು.
ಗಣೇಶರಿಗೆ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಇವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೊಂದು ದೊಡ್ಡ ನಷ್ಟ. ಹಲವರು ಇವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಗಣೇಶ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.