ಜೀವನದಿ ಪಲ್ಗುಣಿಗೆ ಮರಳಿ ತ್ಯಾಜ್ಯ ನೀರು
Tuesday, April 7, 2026
ಮಂಗಳೂರು: 'ಜೀವನದಿ ಪಲ್ಗುಣಿಯನ್ನು ಅಪಾಯಕಾರಿ ಮಾಲಿನ್ಯದಿಂದ ರಕ್ಷಿಸಿ' ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಮೆರವಣಿಗೆ ಹಮ್ಮಿಕೊಂಡ ಸಂದರ್ಭದಲ್ಲಿಯೆ ಮಂಗಳೂರಿನ ಕೈಗಾರಿಕೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಜಂಟಿ ಪತ್ರಿಕಾಗೋಷ್ಟಿ ನಡೆಸಿದ್ದರು. "ನಾವು ಪರಿಶುದ್ದರು" ಎಂದು ಘೋಷಿಸುತ್ತಾ, 'ನಮ್ಮ ಕೈಗಾರಿಕೆಗಳು ತ್ಯಾಜ್ಯನೀರನ್ನು ಶುದ್ದೀಕರಿಸಿ 100 ಶೇಕಡಾ ಮರುಬಳಕೆ ಮಾಡುತ್ತವೆ, ನಮ್ಮದು 0 ಡಿಸ್ಚಾರ್ಜ್" ಎಂದು ಸಮಜಾಯಿಷಿ ನೀಡಿದ್ದವು. ನಮ್ಮ ಮೇಲೆ ವೃಥಾ ಆರೋಪ ಮಾಡಲಾಗುತ್ತಿದೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು.
ಅಂದಿನ ಪತ್ರಿಕಾಗೋಷ್ಟಿಯಲ್ಲಿ MRPL, BASF, ಅದಾನಿ ಗುಂಪಿನ ವಿಲ್ಮರ್, ಬಾಬಾ ರಾಮದೇವ್ ಗುಂಪಿನ ರುಚಿಗೋಲ್ಡ್, ಸಣ್ಣ ಕೈಗಾರಿಕಾ ಸಂಘ ಸಹಿತ ಹತ್ತಾರು ಕೈಗಾರಿಕೆಗಳ ಪ್ರತಿನಿಧಿಗಳು ಇದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೂ ಕೈಗಾರಿಕಾ ವಲಯದ ಪ್ರತಿನಿಧಿಗಳ ಪರವಾಗಿಯೆ ನಿಲುವು ವ್ಯಕ್ತಪಡಿಸಿದ್ದರು, "ಮಾಲಿನ್ಯ ಎಲ್ಲವೂ ನಾಗರಿಕರ ವಸತಿ ಪ್ರದೇಶದಿಂದ ಹರಿದು ಬರುತ್ತಿದೆ" ಎಂದು ವಾದ ಮಂಡಿಸಿದ್ದರು.
ಕೆಳಗೆ ಹಾಕಿರುವುದು ಈ ದಿನ ಚಿತ್ರೀಕರಿಸಿರುವ ವೀಡಿಯೋ. ಇದು ಬೈಕಂಪಾಡಿ ಕೈಗಾರಿಕಾ ವಲಯದ ರುಚಿಗೋಲ್ಡ್ ಬಳಿಯಿಂದ ಹಾದು ಪಲ್ಗುಣಿಯ ಉಪನದಿ ಕುಡುಂಬೂರು ಹೊಳೆಗೆ ಕೈಗಾರಿಕಾ ತ್ಯಾಜ್ಯದ ನೀರು ಹರಿದು ಸೇರುತ್ತಿರುವ ದೃಶ್ಯ. ಇಲ್ಲಿಂದ ಈ ಕೊಳೆತು ನಾರುತ್ತಿರುವ ವಿಷಕಾರಿ ಕೈಗಾರಿಕಾ ತ್ಯಾಜ್ಯದ ನೀರು ಕಣ್ಣಳತೆ ದೂರದಲ್ಲಿರುವ ಪಲ್ಗುಣಿಯನ್ನು ಸೇರುತ್ತದೆ, ನದಿಯನ್ನು ನಿರ್ಜೀವಗೊಳಿಸುತ್ತದೆ.
ಈ ಭಾಗದಲ್ಲಿ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಮಧ್ಯಮ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳ ಹೊರತು ಯಾವ ವಸತಿ ಬಡಾವಣೆಯೂ ಇಲ್ಲ. ಈ ಕೈಗಾರಿಕೆಗಳು ತಮ್ಮ ಘಟಕದ ತ್ಯಾಜ್ಯ ನೀರನ್ನು ಶುದ್ದೀಕರಿಸಿ 100 ಶೇಕಡಾ ಮರು ಬಳಕೆ ಮಾಡುವುದು ನಿಜವಾದರೆ, ಕೈಗಾರಿಕಾ ವಲಯದ ರುಚಿಗೋಲ್ಡ್ ಬಳಿಯಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರು ಯಾರದ್ದು? ಮಾಲಿನ್ಯ ನಿಯಂತ್ರಣ ಮಂಡಳಿಗೆ ತನ್ನ ಕಚೇರಿಯ ಕೂಗಳತೆ ದೂರದಲ್ಲಿ ಈ ಮಟ್ಟಿಗೆ ನದಿ ಮಾಲಿನ್ಯ ಆಗುತ್ತಿರುವುದು ಕಣ್ಣಿಗೆ ಕಾಣುವುದಿಲ್ಲವೆ, ಜಿಲ್ಲಾಡಳಿತಕ್ಕೆ ಇದು ತಲೆ ಕೆಡಿಸಬೇಕಾದ ವಿಷಯ ಅಲ್ಲವೆ?
ಕಳೆದ ಎರಡು ತಿಂಗಳಿನಿಂದ ಪಲ್ಗುಣಿ ನದಿಯ ತೀವ್ರ ಮಾಲಿನ್ಯದ ಕುರಿತು ಬಹಳಷ್ಟು ದೂರು, ಚರ್ಚೆ, ಪ್ರತಿಭಟನೆಗಳು ನಡೆಯುತ್ತಿದ್ದರೂ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದಿರುವುದು, ಮೌನ ವಹಿಸಿರುವುದು ನಿರಾಶಾದಾಯಕ. ಸ್ಥಳೀಯ ಜನತೆ ನದಿ ಮಾಲಿನ್ಯದ ವಿರುದ್ದದ ತಮ್ಮ ಹೋರಾಟವನ್ನು ತೀವ್ರಗೊಳಿಸಬೇಕು. ಇಲ್ಲದಿದ್ದಲ್ಲಿ ಇನ್ನಷ್ಟು ತೀವ್ರವಾದ ಆರೋಗ್ಯದ ಸಮಸ್ಯೆ, ಪರಿಸರ ಮಾಲಿನ್ಯದ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
ಜಿಲ್ಲಾಡಳಿತ ತಕ್ಷಣವೆ ಕೈಗಾರಿಕಾ ಘಟಕಗಳನ್ನು ತಪಾಸಣೆಗೆ ಒಳಪಡಿಸಲಿ ಎಂದು ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


