ಉಪ್ಪುಂದ ಸಹಕಾರಿ ಸಂಘದಲ್ಲಿ ಹಣ ದುರುಪಯೋಗ: ಪ್ರಕರಣ ದಾಖಲು
ಕುಂದಾಪುರ: ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ (ನಿ), ಉಪ್ಪುಂದ ಈ ಸಂಸ್ಥೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಸಂಘದ ಮಾಜಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಪ್ರಧಾನ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಣಕಾಸು ಅಕ್ರಮದ ಆರೋಪಗಳು ಕೇಳಿಬಂದಿವೆ.
ಶ್ರೀನಿವಾಸ ಕೆ. ಎಂಬವರು ಪ್ರಸ್ತುತ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಘಟನೆಯ ಬಗ್ಗೆ ದೂರು ಸಲ್ಲಿಸಿದ್ದಾರೆ. 2023-24ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಅಕ್ರಮ ಬೆಳಕಿಗೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಈ ಹಿಂದೆ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ನಾವುಂದ ಗ್ರಾಮದ ಸುಭಾಶ್ಚಂದ್ರ ಹಾಗೂ ಪ್ರಧಾನ ವ್ಯವಸ್ಥಾಪಕರಾಗಿದ್ದ ದೀಪಕ್ ಕುಮಾರ್ ಮರವಂತೆ ಗ್ರಾಮದವರು. ಇವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಒಟ್ಟು 80,91,996 ರೂ. ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಸಂಘಕ್ಕೆ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಈ ಸಂಬಂಧ ನ್ಯಾಯಾಲಯದ ಖಾಸಗಿ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.