ಮಂಗಳೂರು ಎಕ್ಸ್‌ಪರ್ಟ್ ಸಂಸ್ಥೆಯ ಹೆಸರು ದುರುಪಯೋಗ ಪಡಿಸಿದರೆ ಕಾನೂನು ಕ್ರಮ
ಟ್ರೇಡ್‌ಮಾರ್ಕ್ ಕಾಯಿದೆ 1999ರ ಅಡಿಯಲ್ಲಿ ನೋಂದಾಯಿತ ಸಂಸ್ಥೆಯಾಗಿರುವ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಮಂಗಳೂರು ಹೊರತುಪಡಿಸಿ ರಾಜ್ಯದ ಇತರ ಯಾವುದೇ ಭಾಗಗಳಲ್ಲಿ ತನ್ನ ಅಧಿಕೃತ ಶಾಖೆ ಅಥವಾ ವಿಸ್ತರಣಾ ಘಟಕಗಳನ್ನು ಹೊಂದಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಸ್ಪಷ್ಟಪಡಿಸಿದ್ದಾರೆ.
ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಮಂಗಳೂರಿನ ವಳಚ್ಚಿಲ್ ಹಾಗೂ ಕೊಡಿಯಾಲ್‌ಬೈಲ್‌ನಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜು, ಎಕ್ಸ್‌ಪರ್ಟ್ ಪಬ್ಲಿಷಿಂಗ್ ಹೌಸ್, ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸಸ್, ಎಕ್ಸ್‌ಪರ್ಟ್ ಪೋಸ್ಟಲ್ ಕೋಚಿಂಗ್, ಎಕ್ಸ್‌ಪರ್ಟ್ ಇ-ಲರ್ನ್, ಎಕ್ಸ್‌ಪರ್ಟ್ ಎಜ್ಯುಫ್ರಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಸಂಸ್ಥೆಗಳು ಮಂಗಳೂರಿನ ವಳಚ್ಚಿಲ್ ಅಥವಾ ಕೊಡಿಯಾಲ್‌ಬೈಲ್‌ನಲ್ಲಿ ಮಾತ್ರ ಇವೆ.
ಆದಾಗಿಯೂ, ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಎಕ್ಸ್‌ಪರ್ಟ್, ನ್ಯೂ ಎಕ್ಸ್‌ಪರ್ಟ್ ಸೇರಿದಂತೆ ಸಮಾನ ಹೆಸರುಗಳನ್ನು ಬಳಸಿಕೊಂಡು ಕೆಲವು ಶಿಕ್ಷಣ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಈ ರೀತಿಯ ಸಂಸ್ಥೆಗಳಿಗೂ ಮಂಗಳೂರಿನ ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇಂತಹ ಹೆಸರಿನ ಗೊಂದಲದಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ತಪ್ಪಾಗಿ ಮಾರ್ಗದರ್ಶನ ಪಡೆಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮನವಿ ಮಾಡಿದ್ದಾರೆ.
ಇಂತಹ ಅನಧಿಕೃತ ಸಂಸ್ಥೆಗಳೊಂದಿಗೆ ನಡೆಸುವ ವ್ಯವಹಾರಗಳು ಅಥವಾ ವಿದ್ಯಾರ್ಥಿಗಳ ಪ್ರವೇಶದಿಂದ ಉಂಟಾಗುವ ಪರಿಣಾಮಗಳಿಗೆ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಯಾವುದೇ ರೀತಿಯ ಹೊಣೆಗಾರಿಕೆಯನ್ನು ವಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಕ್ಸ್‌ಪರ್ಟ್ ಸಂಸ್ಥೆಯ ಹೆಸರು, ಲೋಗೋ ಅಥವಾ ಶಾಖೆ/ವಿಸ್ತರಣಾ ಘಟಕ ಎಂದು ಸುಳ್ಳು ಪ್ರಚಾರ ಮಾಡುತ್ತಿರುವವರ ವಿರುದ್ಧ ಟ್ರೇಡ್‌ಮಾರ್ಕ್ ಕಾಯಿದೆ ಪ್ರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರೊ. ನರೇಂದ್ರ ಎಲ್. ನಾಯಕ್ ಎಚ್ಚರಿಕೆ ನೀಡಿದ್ದಾರೆ.