ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಸೂಚನೆ
ಮಂಗಳೂರು: ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವಿಕೆ ಹಾಗೂ ಮಳೆಗಾಲದ ಪ್ರಾಕೃತಿಕ ವಿಕೋಪ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯ್ತಿ ಮಂಗಳೂರು ಇಲ್ಲಿನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಗೆಯ ನೀರಿನ ಬರ ಹಾಗೂ ಮಳೆಗಾಲದ ಪ್ರಾಕೃತಿಕ ಅವಘಡಗಳನ್ನು ಎದುರಿಸಲು ಜಿಲ್ಲಾಡಳಿತ ಕೈಗೊಂಡ ಸಿದ್ಧತೆ ಕುರಿತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾಹಿತಿ ಬಯಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ದರ್ಶನ್, ಜನವರಿಯಲ್ಲೇ ಜಿ.ಪಂ. ಸಿಇಒ ಜೊತೆ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕುಡಿವ ನೀರಿನ ಅಭಾವ ಇರುವ ಪ್ರದೇಶಗಳ ಪಟ್ಟಿಯನ್ನು ತರಿಸಿಕೊಂಡು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ನಿರ್ದೇಶನ ನೀಡಲಾಗಿದೆ. ಕುಡಿವ ನೀರಿ ನ ಹಾಗೂ ಪ್ರಾಕೃತಿಕ ತೊಂದರೆ ನಿವಾರಣೆಗೆ ಆಯಾ ಸ್ಥಳೀಯ ಆಡಳಿತಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದರು.
ಈಗಾಗಲೇ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದ್ದು, ಅನಿವಾರ್ಯವಾದರೆ ಅವುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅತ್ಯಧಿಕ ಉಷ್ಣಾಂಶ, ಗುಡುಗು, ಸಿಡಿಲು, ಮಳೆ ಮುಂತಾದ ಪ್ರಾಕೃತಿಕ ತೊಂದರೆಗಳನ್ನು ಎದುರಿಸಲು ಆರೋಗ್ಯ ಕೇಂದ್ರಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಭೂಕುಸಿತ ತಡೆಗೆ ಕ್ರಮಕ್ಕೆ ಗ್ರಾಮೀಣ ಪ್ರದೇಶಗಳಿಗೆ ೨೫ ಕೋಟಿ ರು.ಗಳಲ್ಲಿ ಕಾಮಗಾರಿಗೆ ಟೆಂಡರ್ ಪೂರ್ಣಗೊಂಡಿದೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ೩.೫೦ ಕೋಟಿ ರು. ಬಿಡುಗಡೆಯಾಗಿದ್ದು, ಚರಂಡಿಗಳ ಹೂಳೆತ್ತುವ ಕಾಮಗಾರಿಯೂ ನಡೆಯಲಿದೆ. ಪಾಲಿಕೆಯ ೮ ಕಡೆಗಳಲ್ಲಿ ಕೃತಕ ನೆರೆ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಸದ್ಯ ನೀರಿನ ಕೊರತೆ ಇಲ್ಲ:
ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ ಇದ್ದು, ಸದ್ಯದ ಮಟ್ಟಿಗೆ ನೀರಿನ ಕೊರತೆ ಇಲ್ಲ. ಜೂ. ೧೫ರ ವರೆಗೆ ಸಾಕಾಗುವಷ್ಟು ನೀರಿನ ಸಂಗ್ರಹ ಇದೆ. ತುಂಬೆ ಡ್ಯಾಂ ಅಲ್ಲದೆ, ಎಎಂಆರ್, ಹರೇಕಳ ಡ್ಯಾಂನಿಂದಲೂ ನೀರು ಪಡೆಯಲಾಗುವುದು. ಪ್ರಸಕ್ತ ನೀರಿನ ಒಳ ಹರಿವು ಇದ್ದು, ಮೇ ಕೊನೆ ವಾರದಲ್ಲಿ ಅವಶ್ಯವಾದರೆ ನೀರಿನ ರೇಶನಿಂಗ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು.
ಉಳ್ಳಾಲದಲ್ಲಿ ಟ್ಯಾಂಕರ್ ನೀರು:
ಗ್ರಾಮೀಣ ಭಾಗದ ಉಳ್ಳಾಲದಲ್ಲಿ ನಾಲ್ಕು ಗ್ರಾಮ ಪಂಚಾಯ್ತಿಗಳಲ್ಲಿ ಟ್ಯಾಂಕರ್‌ನಲ್ಲಿ ಕುಡಿವ ನೀರು ಪೂರೈಸಲಾಗುತ್ತಿದೆ. ಕೊಳವೆಬಾವಿಯಲ್ಲಿ ನೀರಿನ ಕೊರತೆ ಉಂಟಾದರೆ ಶಾಸಕರ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್ ಸಮಿತಿಯ ಅನುಮೋದನೆ ಪಡೆದು ಕಾಮಗಾರಿ ನಡೆಸಬೇಕಾಗುತ್ತದೆ. ಬಹುಗ್ರಾಮ ಕುಡಿವ ನೀರು ಹಾಗೂ ಸಿಂಗಲ್ ವಿಲೇಜ್ ಯೋಜನೆಯಡಿ ಸಾಧ್ಯವಾದಷ್ಟು ಮಟ್ಟಿಗೆ ಕುಡಿವ ನೀರಿನ ಅಭಾವ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿ.ಪಂ. ಸಿಇಒ ವಿನಾಯಕ ನರ್ವಾಡೆ ತಿಳಿಸಿದರು.