ಕನಿಷ್ಠ ಕೂಲಿಗಾಗಿ ನಡೆಸಿದ ನೋಯ್ಡಾ ಕಾರ್ಮಿಕರ ಹೋರಾಟಕ್ಕೆ ಸೌಹಾರ್ದ ಬೆಂಬಲ ಹಾಗೂ ಉತ್ತರ ಪ್ರದೇಶ ಸರಕಾರ ಕಾರ್ಮಿಕರ ಮೇಲೆ ನಡೆಸಿದ ಅಮಾನುಷ ಧಾಳಿ ಖಂಡಿಸಿ ಪ್ರತಿಭಟನೆ

ಕನಿಷ್ಠ ಕೂಲಿಗಾಗಿ ನಡೆಸಿದ ನೋಯ್ಡಾ ಕಾರ್ಮಿಕರ ಹೋರಾಟಕ್ಕೆ ಸೌಹಾರ್ದ ಬೆಂಬಲ ಹಾಗೂ ಉತ್ತರ ಪ್ರದೇಶ ಸರಕಾರ ಕಾರ್ಮಿಕರ ಮೇಲೆ ನಡೆಸಿದ ಅಮಾನುಷ ಧಾಳಿ ಖಂಡಿಸಿ ಪ್ರತಿಭಟನೆ


ಮಂಗಳೂರು: ಕನಿಷ್ಠ ಕೂಲಿ, ಗುತ್ತಿಗೆ ಪದ್ದತಿ ರದ್ದು,ಗುತ್ತಿಗೆ ಕಾರ್ಮಿಕರ ಖಾಯಮಾತಿಗಾಗಿ ಆಗ್ರಹಿಸಿ ಉತ್ತರಪ್ರದೇಶದ ನೋಯ್ಡಾ ಕಾರ್ಮಿಕರ ಸಮರಶೀಲ ಹೋರಾಟವನ್ನು ಬೆಂಬಲಿಸಿ ಹಾಗೂ ಕಾರ್ಮಿಕರ ಹೋರಾಟವನ್ನು ದಾರಿ ತಪ್ಪಿಸಲು ಸ್ವತಃ ಸರಕಾರವೇ ಹಿಂಸೆಗೆ ಪ್ರಚೋದಿಸಿ 500ಕ್ಕೂ ಮಿಕ್ಕಿದ ಅಮಾಯಕ ಕಾರ್ಮಿಕರನ್ನು ಜೈಲಿಗಟ್ಟಿದ ಯೋಗಿ ಆದಿತ್ಯನಾಥ ಸರಕಾರದ ಅಮಾನುಷ ಧಾಳಿಯನ್ನು ಖಂಡಿಸಿ ಮಂಗಳೂರು ನಗರದಲ್ಲಿಂದು CITU ನೇತೃತ್ವದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಯಿತು.ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಅಕ್ರೋಶಭರಿತರಾಗಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕಾರ್ಮಿಕರ ಹೋರಾಟಕ್ಕೆ ದ.ಕ.ಜಿಲ್ಲೆಯ ಕಾರ್ಮಿಕ ವರ್ಗದ ಪರವಾಗಿ ಸೌಹಾರ್ದ ಬೆಂಬಲವನ್ನು ಕೂಡ ಸಾರಿದರು.


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ CITU ದ.ಕ. ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಅವರು, ಅಚ್ಛೇದಿನ್ ತರುವುದಾಗಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರ ಕಳೆದ 12  ವರ್ಷಗಳಲ್ಲಿ ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗದ ಮೇಲೆ ತೀವ್ರವಾದ ಪ್ರಹಾರವನ್ನು ನಡೆಸುತ್ತಾ ಬಂದಿದೆ.29 ಪ್ರಮುಖ ಕಾರ್ಮಿಕ ಕಾನೂನುಗಳನ್ನೇ ದೇಶದ ಕಾರ್ಪೊರೇಟ್ ಬಂಡವಾಳಶಾಹಿಗಳ ಪಾದತಳಕ್ಕೆ ಸಮರ್ಪಿಸಿ ಕಾರ್ಮಿಕ ವರ್ಗದ ಬದುಕನ್ನು ಸಂಕಷ್ಟಕ್ಕೆ ದೂಡಿದೆ.ನೋಯ್ಡಾ ಕಾರ್ಮಿಕರ ಹೋರಾಟವನ್ನು ದಾರಿ ತಪ್ಪಿಸಲು ಯೋಗಿ ಆದಿತ್ಯನಾಥ ಸರಕಾರದ ಸಚಿವರೊಬ್ಬರು ಇದರ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳಿಕೆ ಕೊಟ್ಟರೆ,ಅದೇ ಸರಕಾರ ಸಂಜೆಯೊಳಗಡೆ ಕನಿಷ್ಠ ಕೂಲಿಯನ್ನು ಹೆಚ್ಚಳ ಮಾಡಿದೆ ಎಂದು ಹೇಳಿದರು.


CITU ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ, ದೇಶವನ್ನು ಕಾಯುವ ಚೌಕಿದಾರ,56 ಇಂಚಿನ ಎದೆಯುಳ್ಳ,ವಿಶ್ವ ಗುರುವೆಂದು ತನ್ನನ್ನು ತಾನೇ ಕರೆಸಿಕೊಂಡ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕಾರ್ಮಿಕರಿಗೆ ನಿಗದಿಪಡಿಸಿದ ಕನಿಷ್ಠ ಕೂಲಿ ದಿನವೊಂದಕ್ಕೆ 176 ರೂ. ಅಂದರೆ ತಿಂಗಳಿಗೆ ಸಿಗುವ 4500 ರೂ.ರಷ್ಟು ಕೂಲಿಯಲ್ಲಿ ಸರಕಾರ ನಡೆಸುವವರು ಮೊದಲು ಬದುಕಿ ತೊರಿಸಲಿ ಎಂದು ಸವಾಲು ಹಾಕಿದರು. ಮುಂದುವರಿಸುತ್ತಾ, ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿದ ಕೇಂದ್ರ ಸರಕಾರ ಕಾರ್ಮಿಕರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆಯನ್ನು ನೀಡದೆ ಸತಾಯಿಸುತ್ತಿದೆ. ಒಂದು ಕಡೆ ವಿಪರೀತ ಬೆಲೆಯೇರಿಕೆ, ಮತ್ತೊಂದು ಕಡೆ ನಿಕೃಷ್ಟವಾಗಿ ಸಿಗುತ್ತಿರುವ ಕನಿಷ್ಠ ಕೂಲಿಯಿಂದಾಗಿ ಬದುಕು ಸಾಗಿಸಲು ಹರಸಾಹಸ ಪಡುತ್ತಿರುವ ಕಾರ್ಮಿಕ ವರ್ಗ ಬದುಕು ಸಾಗಿಸಲು ನೆರವಾಗುವ ಕನಿಷ್ಠ ಕೂಲಿಗಾಗಿ ನಿರಂತರವಾದ ಹೋರಾಟವನ್ನು ನಡೆಸುತ್ತಿದೆ. ವಿಪರೀತ ಬೆಲೆಯೇರಿಕೆಗೆ ಜಾಗತಿಕ ವಿದ್ಯಮಾನಗಳು ಕಾರಣವಾಗಿದ್ದು, ಅಮೇರಿಕಾ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಭೀಕರ ಧಾಳಿ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲದ ಕೊರತೆಗೆ ಕಾರಣವಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಖಜಾಂಚಿಗಳಾದ ಯೋಗೀಶ್ ಜಪ್ಪಿನಮೊಗರುರವರು, ಉತ್ತರಭಾರತದಲ್ಲಿ ಕನಿಷ್ಠ ಕೂಲಿಗಾಗಿ ಭುಗಿಲೆದ್ದ ಕಾರ್ಮಿಕರ ಆಕ್ರೋಶ ದೇಶದ ಕಾರ್ಮಿಕ ಚಳುವಳಿಗೆ ಸ್ಪೂರ್ತಿ ನೀಡಿದ್ದು, ದುಡಿಯುವ ವರ್ಗದ ಚಳುವಳಿ ಮಾತ್ರವೇ ದೇಶದ ಅಭಿವೃದ್ಧಿಗೆ ಪೂರಕವಾಗಿ ದೇಶವನ್ನು ಮುನ್ನಡೆಸಬಲ್ಲದು ಎಂದು ದೃಢವಾಗಿ ಹೇಳಿದರು.

ಸಭೆಯನ್ನುದ್ದೇಶಿಸಿ CITU ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟು,ರವಿಚಂದ್ರ ಕೊಂಚಾಡಿಯವರು ಮಾತನಾಡಿದರು.

ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ನೋಣಯ್ಯ ಗೌಡ, ಜಯಂತಿ ಶೆಟ್ಟಿ, ಜಯಲಕ್ಷ್ಮಿ, ಅಶೋಕ್ ಶ್ರೀಯಾನ್, ಅಶೋಕ್ ಸಾಲ್ಯಾನ್, ದಿನೇಶ್ ಶೆಟ್ಟಿ, ಲೋಕೇಶ್ ಎಂ,ಮೋಹನ್ ಜಲ್ಲಿಗುಡ್ಡೆ, ಪ್ರಗತಿಪರ ಚಿಂತಕರಾದ ಡಾ.ಕೃಷ್ಣಪ್ಪ ಕೊಂಚಾಡಿ, ರೈತ ನಾಯಕರಾದ ಸದಾಶಿವದಾಸ್, ದಲಿತ ಸಂಘಟನೆಯ ಮುಖಂಡರಾದ ಕೃಷ್ಣ ತಣ್ಣೀರುಬಾವಿ,ಯುವಜನ ನಾಯಕರಾದ ನವೀನ್ ಕೊಂಚಾಡಿ, ಮಿಥುನ್, ಮಹಿಳಾ ಮುಖಂಡರಾದ ಅಸುಂತ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article