ಭೂಸ್ವಾಧೀನ ಹೆಸರಿನಲ್ಲಿ ಅವ್ಯವಹಾರ ಆರೋಪ: ದಿಶಾ ಸಭೆಯಲ್ಲಿ ಚರ್ಚೆ-ಪರಿಶೀಲನೆಗೆ ಸಂಸದ ಚೌಟ ಸೂಚನೆ

ಭೂಸ್ವಾಧೀನ ಹೆಸರಿನಲ್ಲಿ ಅವ್ಯವಹಾರ ಆರೋಪ: ದಿಶಾ ಸಭೆಯಲ್ಲಿ ಚರ್ಚೆ-ಪರಿಶೀಲನೆಗೆ ಸಂಸದ ಚೌಟ ಸೂಚನೆ

 ಭೂಸ್ವಾಧೀನ ಹೆಸರಿನಲ್ಲಿ ಅವ್ಯವಹಾರ ಆರೋಪ: ದಿಶಾ ಸಭೆಯಲ್ಲಿ ಚರ್ಚೆ-ಪರಿಶೀಲನೆಗೆ ಸಂಸದ ಚೌಟ ಸೂಚನೆ

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿವಿಧ ಕಾಮಗಾರಿಗಳಿಗೆ ಭೂಸ್ವಾಧೀನಗೊಂಡು ಪರಿಹಾರ ನೀಡಿದ ನಂತರವೂ ಆ ಭೂಮಿ  ನಿಗದಿತ ಯೋಜನೆಗೆ ಬಳಕೆಯಾಗದಿರುವ ಮೂಲಕ ಸರಕಾರದ ಹಣ ಪೋಲಾಗುತ್ತಿದೆ ಎಂಬ ಆರೋಪ ಮಂಗಳವಾರ ನಡೆದ ದಿಶಾ ಸಭೆಯಲ್ಲಿ ವ್ಯಕ್ತವಾಯಿತು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ದ.ಕ. ಜಿ.ಪಂನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುವೆಟ್ಟು ಗ್ರಾ.ಪಂನ. ಪ್ರಕರಣವೊಂದನ್ನು ಉಲ್ಲೇಖಿಸಿ ಶಾಸಕ ಹರೀಶ್ ಪೂಂಜ ಈ ಗಂಭೀರ ಆರೋಪ ಮಾಡಿದರು. 

ಕುವೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಮನೆ ಇರುವ ಭೂ ಸ್ವಾಧೀನಕ್ಕಾಗಿ ಫಲಾನುಭವಿಗೆ ೪೪ ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಆದರೆ ಒಂದು ಸೆಂಟ್ಸ್ ಭೂಮಿಯೂ ಭೂಸ್ವಾಧೀನದ ಉzಶಕ್ಕಾಗಿ ಬಳಕೆಯಾಗಿಲ್ಲ. ಆದರೆ ಫಲಾನುಭವಿ ಪಂಚಾಯತ್‌ನಿಂದ ಮನೆ ರಿಪೇರಿಗೆ ಪರವಾನಿಗೆ ಪಡೆದು ಇರುವ ಕಟ್ಟಡದಲ್ಲಿ ಮತ್ತೆ  ಒಂದು ಮಹಡಿಯ ಮನೆ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಯಾವ ರೀತಿಯಲ್ಲಿ ಪರವಾನಿಗೆ ನೀಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ರಾಷ್ಟ್ರೀಯ ಹಾಗೂ ರಾಜ್ಯ  ಹೆದ್ದಾರಿಯ ರಸ್ತೆ ಅಭಿವೃದ್ಧಿ ಸಂದರ್ಭ ಇಂತಹ ಹಲವು ಪ್ರಕರಣಗಳು ನಡೆದಿರುವ ಸಾಧ್ಯತೆ ಇದೆ. ಈ ಮೂಲಕ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ಹಣ  ಪೋಲಾಗಿರಬಹುದು. ಈ ಬಗ್ಗೆ ಡಿಡಿಎಲ್‌ಆರ್ ಮೂಲಕ ಪರಿಶೀಲನೆ ನಡಿಸಿ ಕ್ರಮ ಆಗಬೇಕು ಎಂದು ಹರೀಶ್ ಪೂಂಜ ಒತ್ತಾಯಿಸಿದರು.

ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪ್ರತಿಕ್ರಿಯಿಸಿ, ಹೆದ್ದಾರಿಗಳ 40 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ, ನಿರ್ಮಾಣ ವ್ಯವಸ್ಥೆ ಮಾಡುವಂತಿಲ್ಲ. ನಿರ್ದಿಷ್ಟ ಪ್ರಕರಣದಲ್ಲಿ ಅಂತಹ ಅವ್ಯವಹಾರ ಆಗಿದ್ದರೆ ಆ ಕಟ್ಟಡ ನೆಲಸಮಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿಯೂ ಇಂತಹ ಪ್ರಕರಣಗಳು ಇರುವ ಸಾಧ್ಯತೆ ಇದ್ದು, ಪರಿಶೀಲನೆಯ ಅಗತ್ಯವಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು. 

ಹೆದ್ದಾರಿ ರಸ್ತೆ ಬದಿ ತ್ಯಾಜ್ಯ ಎಸೆತ-ಅಭಿಯಾನಕ್ಕೆ ಸಲಹೆ

ಫರಂಗಿಪೇಟೆಯಿಂದ ಮಂಗಳೂರಿಗೆ ಬರುವ ದಾರಿಯಲ್ಲಿ ಹೆದ್ದಾರಿ ರಸ್ತೆಯಲ್ಲಿ ಅಲ್ಲಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಫರಂಗಿಪೇಟೆ, ವಳಚ್ಚಿಲ್, ತುಂಬೆ ಮೊದಲಾದ  ಕಡೆ ತ್ಯಾಜ್ಯ ರಾಶಿ ತುಂಬಿರುತ್ತದೆ. ಪರಿಸರಾಸಕ್ತರು ಕೆಲವರು ಅಭಿಯಾನದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದ್ದಾರೆ. ಆದರೆ ತ್ಯಾಜ್ಯ  ಹಾಕುವ ಪ್ರಕ್ರಿಯೆ ನಿಲ್ಲುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಅಭಿಯಾನದ ಮೂಲಕ ಈ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯ ನಡೆಸಬೇಕು.  ಬ್ಲಾಕ್‌ಸ್ಪಾಟ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಅದಕ್ಕೆ ಅಗತ್ಯವಾದ ಕ್ರಿಯಾ ಯೋಜನೆಯನ್ನು ಸಲ್ಲಿಸಿ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ರಾಷ್ಟ್ರೀಯ ಹೆದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎ. 25ರಿಂದ ರಾ.ಹೆ. ಪ್ರಾಧಿಕಾರದಿಂದ ಹೂಳೆತ್ತುವ ಕಾಮಗಾರಿ ಎಡಪದವು, ಕೆತ್ತಿಕಲ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು  ಹರಿದು ಹೋಗುವ ಚರಂಡಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಿಲ್ಲ. ಇದರಿಂದ ಇಲ್ಲಿ ಮಳೆಗಾಲದಲ್ಲಿ ಮಳೆ ನೀರು ಸಮೀಪದ ಕೃಷಿ ಭೂಮಿಗೆ ನುಗ್ಗುವ ಸಾಧ್ಯತೆ  ಇದೆ. ಹಾಕಲಾಗಿರುವ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದೆ. ಹೆದ್ದಾರಿಯಿಂದ ಪಿಡಬ್ಲುಡಿ ರಸ್ತೆಗೆ ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ಪಿಲಿಕುಳಕ್ಕೆ ಪ್ರವೇಶವೂ ಸಮ ರ್ಪಕವಾಗಿಲ್ಲ. ಹೆದ್ದಾರಿ ಬದಿಗಳಲ್ಲಿ ಅನಧಿಕೃತ ಕಟ್ಟಡ, ಗೂಡಂಗಡಿಗ ತೆರವು ಬಗ್ಗೆ ಪ್ರತಿ ಬಾರಿಯೂ ಚರ್ಚೆ ಆಗುತ್ತದೆ. ಆದರೆ ಕ್ರಮ ಆಗುವುದಿಲ್ಲ ಎಂದು ನಾಮ  ನಿರ್ದೇಶಿತ ಸದಸ್ಯ ರಾಜೀವ ಶೆಟ್ಟಿ ಸಭೆಯ ಗಮನ ಸೆಳೆದರು.

ಮಹಾಕಾಳಿ ಪಡ್ಪು ಬಳಿ ನೂತನ ರೈಲ್ವೇ ಕೆಳ ಸೇತುವೆ ನಿರ್ಮಾಣವಾಗಿ ವಾಹನಗಳು ಸಂಚಾರ ನಡೆಸುತ್ತಿವೆ. ಆದರೆ, ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವಲ್ಲಿ  ಚರಂಡಿಯಲ್ಲಿ ಹೂಳು ತುಂಬಿ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತದೆ ಎಂದು ಇನ್ನೋರ್ವ ನಾಮ ನಿರ್ದೇಶಿತ ಸದಸ್ಯ ಭರತ್ ಕುಮಾರ್ ಆಕ್ಷೇಪಿಸಿದರು. 

ಈ ಸಂದರ್ಭ ಪ್ರತಿಕ್ರಿಯಿಸಿದ ಎನ್‌ಎಚ್ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಝ್ಮಿ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎ. 25ರಿಂದ ರಾಷ್ಟ್ರೀಯ ಹೆದ್ದಾರಿಯ  ಒಳಚರಂಡಿ ಹೂಳೆತ್ತುವ ಕಾಮಗರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. 

ಪಾಲಿಕೆ ಅಧಿಕಾರಿಗಳ ಜತೆ ಜಂಟಿ ಸಮೀಕ್ಷೆ ಮಾಡಿಕೊಂಡು ಮೇ 10ರೊಳಗೆ ಮಳೆಗಾಲಕ್ಕೆ ಪೂರ್ವಭಾವಿಯಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಸದ ಕ್ಯಾ.  ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಂಪ್‌ವಲ್‌ನಿಂದ ಪಡೀಲ್ ಹಾಗೂ ಪಂಪ್‌ವೆಲ್‌ನಿಂದ ತಲಪಾಡಿ ಭಾಗದಲ್ಲಿಯೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗೂಡಂಗಡಿ, ಅಕ್ರಮ ನಿರ್ಮಾಣಗಳ ತೆರವಿಗೆ ಕ್ರಮ ವಹಿ ಸುವಂತೆ ಅಧಿಕಾರಿಗಳಿಗೆ ಸಂಸದ ಚೌಟ ಸೂಚಿಸಿದರು.

ಮಹಾಕಾಳಿ ಪಡ್ಪು ಪಂಪ್ ಸಮಸ್ಯೆ!

ಮಹಾಕಾಳಿಪಡ್ಪು ಬಳಿ ರೈಲ್ವೇ ಕೆಳ ಸೇತುವೆ ಕಾಮಗಾರಿ ಪೂರ್ಣಗೊಂಡು ಸ್ಮಾರ್ಟ್ ಸಿಟಿಯಿಂದ ಒಳಚಂರಡಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ಮಳೆಗಾಲದಲ್ಲಿ  ಕೃತಕ ನೆರೆ ಸಂಭವಿಸಿದ್ದಲ್ಲಿ ನೀರೆತ್ತಲು ಪಂಪ್ ವ್ಯವಸ್ಥೆ ಇಲ್ಲ ಎಂದು ಸಭೆಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭಾ ತಿಳಿಸಿದರು.

ಈ ಸಂದರ್ಭ ಅಸಮಾಧಾನಗೊಂಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಕೋಟ್ಯಂತರ ರೂ. ಖರ್ಚು ಮಾಡಿ ಕಾಮಗಾರಿ ನಡೆಸಿರುವಾಗ ಪಂಪ್ ಖರೀದಿಸಲು ಆಗುವುದಿಲ್ಲ  ಎಂದರೆ ಏನರ್ಥ. ಅದಕ್ಕೆ ಪಾಲಿಕೆಯಿಂದ ಯಾಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದರು. ಸಭೆಯಲ್ಲಿ ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಉಪ ಅರಣ್ಯ  ಸಂರಕ್ಷಣಾಧಿಕಾರಿ ರವಿಶಂಕರ್ ಉಪಸ್ಥಿತರಿದ್ದರು.


ಕೂಳೂರು ಹಳೆ ಸೇತುವೆ ನಿರ್ವಹಣೆಗೆ ಸೂಚನೆ

ಕಳೆದ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ಕೂಳೂರಿನ ಹೊಸ ಸೇತುವೆ ಕಾಮಗಾರಿ ಈ ಮಳೆಗಾಲಕ್ಕೆ ಮೊದಲು ಪೂರ್ಣಗೊಳ್ಳುವ ಸಾಧ್ಯತೆಯೂ ಇಲ್ಲವಾಗಿದೆ.  ಸಭೆಯಲ್ಲಿ ಚರ್ಚೆಯ ಸಂದರ್ಭ ರಾ. ಹೆ. ಯೋಜನಾ ನಿರ್ದೇಶಕರಾದ ಅಬ್ದುಲ್ಲಾ ಜಾವೇದ್‌ರವರು, ಜೂನ್ 31ರೊಳಗೆ ಕೂಳೂರು ಸೇತುವೆ ಸಂಚಾರಕ್ಕೆ ಬಿಟ್ಟು  ಕೊಡಲಾಗುವುದು ಎಂದಾಗ ಸಂಸದ ಕ್ಯಾ. ಬ್ರಿಜೇಶ್ ಚೌಟ ತಡೆದರು.

ಈ ರೀತಿ ಸುಮ್ಮನೆ ದಿನಾಂಕ ನೀಡಬೇಡಿ. ಈಗಾಗಲೇ ಹಲವು ದಿನಾಂಕ ನೀಡಿ ಆಗಿದೆ. ಆದರೆ ಕಾಮಗಾರಿ ಆಗಿಲ್ಲ. ಹಾಗಾಗಿ ಗುತ್ತಿಗೆದಾರರು ಕಾಮಗಾರಿ  ಪೂರ್ಣಗೊಳಿಸುವ ದಿನಾಂಕವನ್ನು ಸ್ಪಷ್ಟಗೊಳಿಸಿದ ಬಳಿಕ ದಿನಾಂಕ ನೀಡಿ.  ಈ ನಡುವೆ, ಮಳೆಗಾಲಕ್ಕೆ ಮುನ್ನ ಹಳೆ ಸೇತುವೆಯಲ್ಲಿ ಸಂಚಾರಕ್ಕೆ ಪೂರಕವಾದ ನಿರ್ವಹಣಾ  ಕಾಮಗಾರಿ ನಡೆಸಿ ಎಂದು ಅಧಿಕಾರಿಗಳಿಗೆ ಸಂಸದರು ತಿಳಿಸಿದರು.


ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೆ ಮಾಡುವಲ್ಲಿ ಕರ್ನಾಟಕ ಸರಕಾರ ವಿಫಲವಾಗಿದೆ. ಜಲಜೀವನ್, ಆಯುಷ್ಮಾನ್ ಯೋಜನೆಗಳ ಕುರಿತಂತೆ ರಾಜ್ಯ ಸರಕಾರ  ಅಸಡ್ಡೆ ತೋರಿಸುತ್ತಿದೆ. ಮಹಿಳಾ ಮೀಸಲಾತಿ ಮಸೂದೆ ಕುರಿತಂತೆ ತಪ್ಪು ವಿವರ ನೀಡಿ ಮಹಿಳೆಯರಿಗೆ ಅನ್ಯಾಯ ಮಾಡಿರುವಂತೆ ಕೇಂದ್ರ ಸರಕಾರದ ಯೋಜನೆಗಳ  ಜಾರಿಯಲ್ಲಿಯೂ ರಾಜ್ಯ ಸರಕಾರ ಜನರಿಗೆ ಅನ್ಯಾಯ ಮಾಡುವುದು ಬೇಡ. ಸಮನ್ವಯತೆಯಿಂದ ಕೆಲಸ ಕಾರ್ಯಗಳಿಗೆ ಪ್ರಸಕ್ತ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕ್ರಮ ವಹಿಸಬೇಕಾಗಿದೆ ಎಂದು ಸಭೆಯ ಬಳಿಕ ಸುದ್ದಿಗಾರರ ಜತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article