ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Sunday, July 26, 2026
ಕಾಸರಗೋಡು: ನಾಲ್ಕು ವರ್ಷಗಳ ಹಿಂದೆ ಕುಂಬಳೆಯಲ್ಲಿ ಬಸ್ ಮಾಲಕರೊಬ್ಬರ ಮನೆಗೆ ನುಗ್ಗಿ, ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಧಿಸಲಾಗಿದೆ. ಪುತ್ತೂರು ಸಂಪ್ಯ ನಿವಾಸಿ ಅಜೀಜ್ ಅಲಿಯಾಸ್ ಅಬ್ದುಲ್ ಅಜೀಜ್ (58) ಬಂಧಿತ ಆರೋಪಿ.
2012ರ ಡಿಸೆಂಬರ್ 22ರಂದು ಕುಂಬಳೆಯ ಅನಿಲ್ ಕುಂಬ್ಳೆ ರಸ್ತೆಯ ಸಮೀಪವಿರುವ ಮಂಗಳೂರಿನಲ್ಲಿ ಬಸ್ ಆಪರೇಟರ್ ಆಗಿದ್ದ ರಾಜೇಶ್ ಶೆಣೈ ಎಂಬವರ ಮನೆಗೆ ಮುಸುಕುಧಾರಿ ದರೋಡೆಕೋರರ ತಂಡ ಸಂಜೆ ಏಳು ಗಂಟೆ ವೇಳೆಗೆ ನುಗ್ಗಿತ್ತು. ಬಂದೂಕು ತೋರಿಸಿ ಮನೆಯವರನ್ನು ಬೆದರಿಸಿದ ದರೋಡೆಕೋರರು, ರಾಜೇಶ್ ಶೆಣೈ ಅವರ ಮುಖಕ್ಕೆ ಯಾವುದೋ ದ್ರವ ಸಿಂಪಡಿಸಿ ಪ್ರಜ್ಞೆ ತಪ್ಪಿಸಿದ್ದರು. ಬಳಿಕ ಕುಟುಂಬದ ಇತರ ಸದಸ್ಯರ ಕೈಕಾಲುಗಳನ್ನು ಕಟ್ಟಿ ಹಾಕಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ 42 ಪವನ್ (366 ಗ್ರಾಂ) ಚಿನ್ನಾಭರಣ ಹಾಗೂ 25 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದರು.