ಪಿಲಿಕುಳ ನ್ಯೂನತೆ ಚರ್ಚೆ, ಸಮಗ್ರ ಪುನರುಜ್ಜೀವನ ಅಗತ್ಯ: ಪ್ರಚಾರದ ಕೊರತೆ
ಶಾಸಕ ಎಸ್.ಆರ್. ಶ್ರೀನಿವಾಸ್ ನೇತೃತ್ವದ ಸಮಿತಿಯು ಶುಕ್ರವಾರ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದ ಬಳಿಕ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಪಿಲಿಕುಳದ ನ್ಯೂನ್ಯತೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿತು.
ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಪಿಲಿಕುಳದ ಅಭಿವೃದ್ಧಿಗೆ ಅಗತ್ಯವಾದ ಕ್ರಮ ಆಗಿಲ್ಲ. ಹಿಂದೆ ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಸಾಕಷ್ಟುಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪ್ರಚಾರ ನೀಡಲಾಗುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಪಿಲಿಕುಳದ ಬಗ್ಗೆ ಯಾವುದೇ ರೀತಿಯ ಪ್ರಚಾರಗಳು ಕಂಡು ಬರುತ್ತಿಲ್ಲ ಎಂದು ಶಾಸಕ ಶಿವಕುಮಾರ್ ಆಕ್ಷೇಪಿಸಿದರು.
ಪಿಲಿಕುಳದಲ್ಲಿ ಲಭ್ಯ ಇರುವ ಖಾಲಿ ಜಾಗ ಬಳಕೆಯೊಂದಿಗೆ ವ್ಯಾಪಕ ಪ್ರಚಾರಾಂದೋಲನದ ಅಗತ್ಯ ಇರುವುದಾಗಿ ಹೇಳಿದ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಮೃಗಾಲಯದ ನಿರ್ವಹಣೆ ಸೇರಿದಂತೆ ಪಿಲಿಕುಳದಲ್ಲಿ ಕೈಗೊಳ್ಳಬಹುದಾದ ಅಗತ್ಯ ಅಭಿವೃದ್ಧಿ ಕಾರ್ಯಗಳು, ಸಿಬ್ಬಂದಿ ಕೊರತೆ, ಸಂಪನ್ಮೂಲಗಳ ಕ್ರೋಢೀಕರಣ ಸೇರಿದಂತೆ ವಿವಿಧ ಇಲಾಖೆಗಳಿಂದ ಮಾಹಿತಿಯೊಂದಿಗೆ ಮಾಸ್ಟರ್ ಪ್ಲಾನ್ ತಯಾರಿಸಿ ನೀಡಿದರೆ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಪಿಲಿಕುಳಕ್ಕೆ ಸರಕಾರದಿಂದ ಎಷ್ಟು ಅನುದಾನ ಬಂದಿದೆ, ಯಾವೆಲ್ಲಾ ಕಂಪನಿಗಳ ಸಹಕಾರ ಪಡೆಯಲಾಗಿದೆ ಎಂದು ಶಾಸಕ ಶರವಣ ಅವರು ಸಭೆಯಲ್ಲಿ ಪ್ರಶ್ನಿಸಿದಾಗ, 2023-24ನೆ ಸಾಲಿನಲ್ಲಿ 6.7 ಕೋಟಿ ರೂ., 24-25ರಲ್ಲಿ 10.2 ಕೋಟಿರೂ ಹಾಗೂ 25-26ನೆ ಸಾಲಿನಲ್ಲಿ 8 ಕೋಟಿರೂ. ಅನುದಾನ ಬಂದಿದೆ. ವಾರ್ಷಿಕ ನಿರ್ವಹಣಾ ವೆಚ್ಚವೇ ಸುಮಾರು 13 ಕೋಟಿ ರೂ.ಗಳವರೆಗೆ ಇದೆ. ಸಿಬ್ಬಂದಿ ಹಾಗೂ ಅನುದಾನದ ಕೊರತೆಯಿಂದ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.
ಖರ್ಚು ವೆಚ್ಚಗಳ ಅಡಿಟ್ ವರದಿಯನ್ನು ಸಮಿತಿಗೆ ಒದಗಿಸುವಂತೆ ಶಾಸಕ ಶರವಣ ಅವರು ಅಧಿಕಾರಿಗಳಿಗೆ ತಿಳಿಸಿದರೆ, ಗಾಲ್?ಫ ಕ್ಲಬ್, ಕೆಯುಐಡಿಎಫ್‌ಸಿಯಿಂದ ಎಷ್ಟು ಆದಾಯವನ್ನು ಪಡೆಯಲಾಗುತ್ತಿದೆ ಎಂಬ ಮಾಹಿತಿಯನ್ನು ಒದಗಿಸುವಂತೆ ಶಾಸಕ ಶಿವಕುಮಾರ್ ಹೇಳಿದರು.
ತಾರಾಲಯದಲ್ಲಿನ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಅಂತಹ ವ್ಯವಸ್ಥೆಗಿಂತ ಅದನ್ನು ಮುಚ್ಚುವುದೇ ಒಳಿತು ಎಂದರು.
ತಾರಾಲಯದ ನಿರ್ವಹಣೆ ಆಗುತ್ತಿದೆಯಾದರೂ, ಅಲ್ಲಿನ ಸೌಂಡ್ ವ್ಯವಸ್ಥೆ, ವೀಡಿಯೋ ಪ್ರದರ್ಶನಗಳು ಮೇಲ್ದರ್ಜೆಗೇರಿಸಲ್ಪಟ್ಟಿಲ್ಲ. ಅದನ್ನು ಬದಲಾಯಿಸಬೇಕು ಎಂದು ಶಾಸಕ ಶಿವಕುಮಾರ್ ತಿಳಿಸಿದಾಗ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪ್ರತಿಕ್ರಿಯಿಸಿ, ಆಧುನಿಕ ತಂತ್ರಜ್ಞಾನಕ್ಕೆ ಪ್ರದರ್ಶನ ಪರದೆಯನ್ನು ಬದಲಾಯಿಸಬೇಕಾದರೆ ಸುಮಾರು 10 ಕೋಟಿ ರೂ.ನಷ್ಟು ಖರ್ಚಾಗಲಿದೆ. ಸರಕಾರದಿಂದ ಇಷ್ಟೊಂದು ಹಣ ವ್ಯಯಿಸುವುದಕ್ಕಿಂತ ಅದಕ್ಕೆ ಖಾಸಗಿ ಹೂಡಿಕೆಯನ್ನು ಮಾಡುವ ನಿಟ್ಟಿನಲ್ಲಿ ಕ್ರಮ ಆಗಬೇಕಾಗಿದೆ ಎಂದರು.
ಪಿಲಿಕುಳದ ಸಮಗ್ರ ಪುನರುಜ್ಜೀವನ ಅಗತ್ಯವಾಗಿದ್ದು, ಈ ಬಗ್ಗೆ ಮಾಸ್ಟರ್ ಪ್ಲಾನ್ ತಯಾರಿಸುತ್ತಿರುವುದಾಗಿ ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಭೂಮಿ ಕಂದಾಯ ಇಲಾಖೆಯಡಿ ಇದ್ದು ಅದನ್ನು ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಸೇರಿದಂತೆ ಅಗತ್ಯ ಅಭಿವೃದ್ಧಿ ದಿಸೆಯಲ್ಲಿ ಜಿಲ್ಲಾಧಿಕಾರಿ ನೀಡುವ ವರದಿ ಆಧಾರದಲ್ಲಿ ಮುಖ್ಯಮಂತ್ರಿಗೆ ಮಾಹಿತಿ ನೀಡಲಾಗುವುದು. ಮುಂಬರುವ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯಲಿದ್ದು, ಅದಕ್ಕೆ ಮುಂಚಿತವಾಗಿ ವರದಿಯನ್ನು ಮುಖ್ಯಮಂತ್ರಿಗೆ ಸಮಿತಿ ಸಲ್ಲಿಸಲಿದೆ ಎಂದು ಸಭೆಯ ಬಳಿಕ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದರು.
ಸಮಿತಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಮಂಥನ್ ಗೌಡ, ಶಿವಣ್ಣ ಬಿ.ಎಸ್., ಸಚಿವಾಲಯದ ಉಪ ಕಾರ್ಯದರ್ಶಿ ಗೋಪಾಲ ರೆಡ್ಡಿ, ಜಿಪಂ ಸಿಇಒ ವಿನಾಯಕ್ ಕರ್ಭಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಪಿಲಿಕುಳ ವಿಜ್ಞಾನ ಕೇಂದ್ರದ ಡಾ. ಶ್ರೀನಿಕೇತನ್ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.