ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ 31 ಲಕ್ಷ ವಂಚನೆ

ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ 31 ಲಕ್ಷ ವಂಚನೆ

ಮಂಗಳೂರು: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿ ನಕಲಿ ಕ್ರಿಮಿನಲ್ ಪ್ರಕರಣದ ಹೆಸರಿನಲ್ಲಿ ಬೆದರಿಕೆ ಹಾಕಿದ ಸೈಬರ್ ವಂಚಕರು, ಮಂಗಳೂರಿನ 64 ವರ್ಷದ ಹಿರಿಯ ನಾಗರಿಕರೊಬ್ಬರಿಂದ ಬರೋಬ್ಬರಿ 31 ಲಕ್ಷ ರೂ. ಹಣ ದೋಚಿರುವ ಘಟನೆ ನಡೆದಿದೆ. ಈ ಸಂಬಂಧ ಮಂಗಳೂರು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೂರಿನ ಪ್ರಕಾರ, ಜು.15ರಂದು ಸಂತ್ರಸ್ತರು ಮನೆಯಲ್ಲಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ, ತಾನು ಭಾರತದ ಡೇಟಾ ಪ್ರೊಟೆಕ್ಷನ್ ಬೋರ್ಡ್ ಅಧಿಕಾರಿ ಆರ್.ಕೆ. ಚೌಧರಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಪಡೆದು ಅದನ್ನು ಬಳಸಿಕೊಂಡು ಮಕ್ಕಳಿಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಕಳುಹಿಸಲಾಗಿದೆ. ಈ ಸಂಬಂಧ ಸುಮಾರು 20 ದೂರುಗಳು ದಾಖಲಾಗಿವೆ ಎಂದು ಹೇಳಿ ವಂಚಕ ಭಯ ಹುಟ್ಟಿಸಿದ್ದಾನೆ.

ನಿಮ್ಮ ಪ್ರಕರಣವನ್ನು ಮುಂಬೈ ಸೈಬರ್ ಸೆಲ್‌ಗೆ ವರ್ಗಾಯಿಸಲಾಗುತ್ತಿದೆ ಎಂದು ಹೇಳಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿಸಿದ್ದಾನೆ. ಆತ ಸಂತ್ರಸ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ವಿವಿಧ ರಾಜ್ಯಗಳಲ್ಲಿ ಕ್ರಿಮಿನಲ್ ಪ್ರಕರಣಗಳಿವೆ ಎಂದು ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ವಿಡಿಯೋ ಕರೆ ಬಂದಿದ್ದು, ತನ್ನನ್ನು ಸಂಜಯ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕೂಡ ಪ್ರಕರಣದ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾನೆ. ಜುಲೈ 16ರಂದು ಮತ್ತೆ ವಿಡಿಯೋ ಕರೆ ಮಾಡಿ ಸಂತ್ರಸ್ತರ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ವಂಚಕರು ಪಡೆದುಕೊಂಡಿದ್ದಾರೆ.

ಜುಲೈ 17ರಂದು ಕರೆ ಮಾಡಿದ ವಂಚಕರು, ನಿಮ್ಮ ಹೆಸರಿನಲ್ಲಿ ಬಂಧನ ವಾರಂಟ್ ಜಾರಿಯಾಗಿದೆ ಎಂದು ಹೆದರಿಸಿದ್ದಾರೆ. ಹಣದ ಪರಿಶೀಲನೆಗಾಗಿ 3.80 ಲಕ್ಷವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ವಂಚಕರ ಮಾತು ನಂಬಿದ ಸಂತ್ರಸ್ತ ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.

ಚಿನ್ನಾಭರಣ ಅಡವಿಟ್ಟು 29 ಲಕ್ಷ ಸಾಲ:

ವಂಚಕರು ಜುಲೈ 18ರಂದು ಮತ್ತೆ ಸಂಪರ್ಕಿಸಿ, ಮನೆಯಲ್ಲಿರುವ ಚಿನ್ನಾಭರಣಗಳನ್ನು ಅಡವಿಟ್ಟು ಹೆಚ್ಚಿನ ಹಣ ಕಳುಹಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ಸಂತ್ರಸ್ತ ಚಿನ್ನಾಭರಣ ಅಡವಿಟ್ಟು 29 ಲಕ್ಷ ಸಾಲ ಪಡೆದಿದ್ದು, ಅದರಲ್ಲಿ 27.20 ಲಕ್ಷವನ್ನು ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ನಂತರ ಅನುಮಾನಗೊಂಡ ಸಂತ್ರಸ್ತರು ತಾನು ಸೈಬರ್ ವಂಚನೆಗೆ ಒಳಗಾಗಿರುವುದನ್ನು ಅರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ನಕಲಿ ತನಿಖೆ, ಬಂಧನದ ಭೀತಿ ಹಾಗೂ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ಒಟ್ಟು 31 ಲಕ್ಷ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article