‘ಎಸ್‌ಐಆರ್ - ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಂತಹದ್ದಲ್ಲ’: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸ್ಪಷ್ಟನೆ

‘ಎಸ್‌ಐಆರ್ - ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಂತಹದ್ದಲ್ಲ’: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸ್ಪಷ್ಟನೆ


ಮಂಗಳೂರು: ಎಸ್‌ಐಆರ್ ಬಗ್ಗೆ ಯಾವುದೇ ರೀತಿಯ ಭಯ, ಅಂಜಿಕೆ ಬೇಡ. ಇದು ಮತದಾರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಮಾಡುವಂತಹದ್ದಲ್ಲ’ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸ್ಪಷ್ಟಪಡಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾದ ವಿಶೇಷ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

2002ರ ಬಳಿಕ ಸುಮಾರು 24 ವರ್ಷಗಳ ಬಳಿಕ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. 18 ವರ್ಷ ತುಂಬಿದ ಎಲ್ಲ ನಾಗರಿಕರಿಗೂ ಮತದಾನದ ಸಂವಿಧಾನಿಕ ಹಕ್ಕನ್ನು ನೀಡಬೇಕಾಗಿದೆ. ಹಾಗಾಗಿ ಎಸ್‌ಐಆರ್ ಮೂಲಕ ಅರ್ಹ ಮತದಾರರನ್ನು ಕಂಡುಹಿಡಿದು ಅವರನ್ನು ಉಳಿಸುವ ಪ್ರಕ್ರಿಯೆ ನಡೆಯುತ್ತದೆ ಎಂದವರು ಹೇಳಿದರು. 

ಮತದಾರರಾದ ಮೇಲೆ ಚಾಚೂ ತಪ್ಪದೆ ಮತದಾನ ಮಾಡಬೇಕು. ಮತದಾನ ಮಾಡದೆ ಪ್ರಶ್ನಿಸುವ ಅಧಿಕಾರವೂ ಇರುವುದಿಲ್ಲ. ಹಾಗಾಗಿ ಮತದಾನದಲ್ಲಿ ಭಾಗವಹಿಸಬೇಕೆಂದರೆ ಪಟ್ಟಿಯಲ್ಲಿ ಹೆಸರು ಇರಬೇಕು. ಕೆಲವೊಮ್ಮೆ ಒಂದು ಮತದಿಂದವೂ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗುತ್ತದೆ. ಅದರಿಂದ ನಿಮ್ಮ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಅವರು ಯುವ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. 

ಆಪ್‌ನಲ್ಲಿ ಸರಿ ಇರುವ ಮಾಹಿತಿಯನ್ನು ಭರ್ತಿ ಮಾಡಲು ಬಿಎಲ್‌ಒಗಳಿಗೆ ಕನಿಷ್ಠ ಎರಡರಿಂದ ಐದು ನಿಮಿಷ ಸಮಯ ಬೇಕು. ಇನ್ನು ಮಾಹಿತಿ ಸರಿ ಇಲ್ಲದಿದ್ದರೆ ಇತರ ಕಡೆಯಿಂದ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಆಪ್‌ನಲ್ಲಿ ಅಪ್‌ಲೋಡ್ ಮಾಡಲು ಅರ್ಧ ಗಂಟೆಯಿಂದ ಒಂದು ಗಂಟೆ ತಗಲಬಹುದು. ಅದಲ್ಲದೆ, ಅಪ್ಲೋಡ್ ಆದ ಮಾಹಿತಿಯನ್ನು ಕೂಡಾ ಸರಿಯಾಗಿ ಮಾಡಲಾಗಿದೆಯೇ ಎಂಬ ಬಗ್ಗೆ ಬಿಎಲ್‌ಒ ಸೂಪರ್ ವೈಸರ್‌ಗಳು ಮಾಡಬೇಕಿದೆ. ಹಾಗಾಗಿ ಸಾರ್ವಜನಿಕರು ಆದಷ್ಟು ಶೀಘ್ರವಾಗಿ ಫಾರಂ ಭರ್ತಿ ಮಾಡಿ ನೀಡಿದರೆ ಸಮರ್ಪಕವಾಗಿ ದಾಖಲಿಸಿಕೊಳ್ಳಲು ಸಹಕಾರಿಯಾಗಲಿದೆ. ಹೊರ ದೇಶಗಳಲ್ಲಿರುವ ಮತದಾರರು ಆನ್‌ಲೈನ್ ಮೂಲಕವೂ ತಮ್ಮ ಮಾಹಿತಿಯನ್ನು ಎಸ್‌ಐಆರ್‌ಗೆ ದಾಖಲಿಸಿಕೊಳ್ಳಲು ಅವಕಾಶವಿದ್ದು, ಈವರೆಗೆ ದ.ಕ. ಜಿಲ್ಲೆಯ ಸುಮಾರು 1,700 ಮಂದಿ ಆನ್‌ಲೈನ್ ಮೂಲಕ ಅರ್ಜಿ ತುಂಬಿದ್ದಾರೆ. ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ. ಸಿಇಒ ವಿನಾಯಕ ಕರ್ಬಾರಿ ಮಾತನಾಡಿ, ಈಗಾಗಲೇ ಎಸ್‌ಐಆರ್ ಪ್ರಕ್ರಿಯೆಯಾಗಿ ಬಿಎಲ್‌ಒಗಳು ಮತದಾರರಿಗೆ ಎನ್ಯುಮರೇಶನ್ (ನಮೂನೆ) ಫಾರಂ ನೀಡಿದ್ದಾರೆ. ಇದೊಂದು ಸರಳ ಪ್ರಕ್ರಿಯೆ ಆಗಿದ್ದು, ಅದನ್ನು ಭರ್ತಿ ಮಾಡಿ ಶೀಘ್ರವೇ ಬಿಎಲ್‌ಒಗಳಿಗೆ ನೀಡುವ ಕಾರ್ಯ ಆಗಬೇಕು. ಇದಕ್ಕಾಗಿ ನುರಿತ ತರಬೇತುದಾರರ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ತಮ್ಮ ಮನೆಯಲ್ಲಿ ಎಲ್ಲರೂ ಫಾರಂ ಭರ್ತಿ ಮಾಡುವುದನ್ನು ಖಾತರಿಪಡಿಸಿಕೊಳ್ಳುವ ಜೊತೆಗೆ ನೆರೆಹೊರೆಯ ಮನೆಯವರೂ ಫಾರಂ ಭರ್ತಿ ಮಾಡಿ ಬಿಎಲ್‌ಒಗಳಿಗೆ ನೀಡುವಲ್ಲಿ ವಿದ್ಯಾರ್ಥಿಗಳ ಸಹಕಾರ ನೀಡಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅರ್ಚಿತ್ ಡೋಂಗ್ರೆ ಉಪಸ್ಥಿತರಿದ್ದರು. 

ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಡಾ. ಸುಮಂಗಲಾ ಎಸ್. ನಾಯಕ್ ಸ್ವಾಗತಿಸಿದರು. ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article