ಅಂಚೆ ಇಲಾಖೆ ಖಾಸಗೀಕರಣದ ವಿರುದ್ಧ ಮುಷ್ಕರ

ಅಂಚೆ ಇಲಾಖೆ ಖಾಸಗೀಕರಣದ ವಿರುದ್ಧ ಮುಷ್ಕರ


ಮಂಗಳೂರು: ಭಾರತೀಯ ಅಂಚೆ ಇಲಾಖೆ ಸಿಬ್ಬಂದಿ ಮೇಲೆ ಮಾನಸಿಕ ಒತ್ತಡದ ಮೂಲಕ ಸ್ವಂತ ಹಣದಲ್ಲಿ ವಿವಿಧ ಖಾತೆ ತೆರೆಯಲು ಒತ್ತಾಯಿಸುತ್ತಿರುವುದಲ್ಲದೆ, ವಿದೇಶಿ ಕಂಪನಿ ಮೆಕ್ಕಿನ್ಸೆ ಸಲಹೆ ಮೇರೆಗೆ ಖಾಸಗೀಕರಣ ನಡೆಯುತ್ತಿದೆ. ಇದರ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಭಾರತೀಯ ಅಂಚೆ ನೌಕರರ ಒಕ್ಕೂಟ ನಿರ್ಧರಿಸಿದೆ ಎಂದು ಅಂಚೆ ನೌಕರರ ಸಂಘದ ಕರ್ನಾಟಕ ವಲಯ ಕಾರ್ಯದರ್ಶಿ ವೀರೇಶ್ ತಿಳಿಸಿದರು. 

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಷ್ಕರದ ಭಾಗವಾಗಿ ಅಂಚೆ ನೌಕರರು ಜು.20ರಿಂದ 27ರವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವರು. ಜು. 28ರಂದು ಮಧ್ಯಾಹ್ನದ ಊಟದ ವಿರಾಮದ ವೇಳೆ ವಿಭಾಗೀಯ ಕಚೇರಿಗಳ ಎದುರು ಪ್ರತಿಭಟನೆ, ಆಗಸ್ಟ್ 5ರಂದು ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ಹಾಗೂ ಆಗಸ್ಟ್ 18ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಹೇಳಿದರು. ಟಾರ್ಗೆಟ್ ಹೆಸರಿನಲ್ಲಿ ಇಲಾಖಾ ಸಿಬ್ಬಂದಿ ಹಾಗೂ ಜಿಡಿಎಸ್ ಸಿಬ್ಬಂದಿಯ ಶೋಷಣೆ ಹಾಗೂ ಸಿಬ್ಬಂದಿ ಸ್ವಂತ ಹಣದಲ್ಲಿ ಖಾತೆ ತೆರೆಯುವ ಒತ್ತಡ ನಿಲ್ಲಿಸಬೇಕು. ನೌಕರರಿಗೆ ಪ್ರತಿ ತಿಂಗಳು ಅವೈಜ್ಞಾನಿಕ ಗುರಿಗಳನ್ನು ನೀಡಲಾಗುತ್ತಿದ್ದು, ಅದನ್ನು ತಕ್ಷಣವೇ ನಿಲ್ಲಿಸಬೇಕು. ಪ್ರಧಾನ ಮಂತ್ರಿಯವರ ಘೋಷಣೆಯ ನಂತರವೂ ಅಂಚೆಗಳನು ರೈಲು ಮೂಲಕ ಕಳುಹಿಸುವ ಬದಲು ಆರ್ಟಿಎನ್ ಮೂಲಕ ಕಳುಹಿಸಲಾಗುತ್ತಿದೆ. ನಗರದಿಂದ ನಗರಕ್ಕೆ ಸಾಗುವ ಆರ್‌ಟಿಎನ್ ಸೇವೆಯನ್ನು ನಿಲ್ಲಿಸಿ ರೈಲ್ವೇ ಅಂಚೆ ಸೇವೆಯ್ನು ಆರಂಭಿಸಬೇಕು. 

ಮೇಲ್ ಮೋಟಾರ್ ಸರ್ವಿಸ್ ಹಾಗೂ ಸಿವಿಲ್ ವಿಂಗ್ ನ ಎಲ್ಲಾ ಖಾಲಿ ಹುದ್ದೆ ತಕ್ಷಣ ಭರ್ತಿ ಮಾಡಬೇಕು. ಅಂಚೆ ಇಲಾಖೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಪೋಸ್ಟಲ್ ಅಕೌಂಟ್ಸ್ ನ ವಿಕೇಂದ್ರೀಕರಣ ನಿಲ್ಲಿಸಿ, ಬಾಕಿ ಇರುವ ಕ್ಯಾಡರ್ ಪುನಾರಚನೆ ಮಾಡಿ ಭಡ್ತಿ ಸೌಲಭ್ಯ ಜಾರಿಗೊಳಿಸಬೇಕು. ಮಾಜಿ ಸೈನಿಕರಿಂದ ಇಲಾಖೆಗೆ ನೇಮಕಗೊಂಡ ಸಿಬ್ಬಂದಿ ವೇತನ ವ್ಯತ್ಯಾಸ ಸರಿಪಡಿಸಬೇಕು. ಅನುಕಂಪ ಆಧರಿತ ನೇಮಕಾತಿಗೆ ಇರುವ ಶೇ.5 ಮಿತಿಯನು ತೆಗೆದು ಹಾಕಿ ಅರ್ಹರಾಗಿರುವ ಎಲ್ಲ ಮೃತ ನೌಕರರ ಅವಲಂಬಿತರನ್ನು ಹುದ್ದೆಗಳಿಗೆ ನೇಮಕ ಮಾಡಬೇಕು. ವಿಶ್ವ ಕರ್ಮ ಜಯಂತಿಯನ್ನು ರಾಷ್ಟ್ರೀಯ ಕಾರ್ಮಿಕ ದಿನವೆಂದು ಘೋಷಿಸಿ ರಜೆ ನೀಡಬೇಕು ಎಂಬ ಬೇಡಿಕೆಗಳೊಂದಿಗೆ ಮುಷ್ಕರ ನಡೆಯಲಿದೆ ಎಂದವರು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರವಿ ಚೌದ್ರಿ, ದಯಾನಂದ ಕತ್ತಲ್ ಸಾರ್, ದೇವಪ್ಪ ಜಿ. ಮ್ಯಾಗೇರಿ, ಸಂತೋಷ್ ಬೂದಿ, ಪ್ರಕಾಶ್ ಕರಡಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article