ಪಿಎಂ ರಾಹತ್ ಯೋಜನೆಯ ಬಗ್ಗೆ ಬೈಂದೂರು ಶಾಸಕರಿಂದ ಸದನದಲ್ಲಿ ಪ್ರಶ್ನೆ
ಕುಂದಾಪುರ: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನದಲ್ಲಿ ಪಾಲ್ಗೊಂಡ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲು ಹಾಗೂ ಖಚಿತ ಚಿಕಿತ್ಸೆ ಯೋಜನೆ (ಪಿಎಂ ರಾಹತ್) ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವುದು ಹಾಗೂ ಈ ಬಗ್ಗೆ ಕೈಗೊಂಡ ಪೂರ್ವ ತಯಾರಿಗಳ ಬಗ್ಗೆ ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ಆರೋಗ್ಯ ಸಚಿವ ಯು. ಟಿ. ಖಾದರ್ ಉತ್ತರಿಸಿದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲಾತಿ ಮತ್ತು ಖಚಿತ ಚಿಕಿತ್ಸಾ ಯೋಜನೆ ಪಿಎಂ ರಾಹತ್ ರಾಜ್ಯದಲ್ಲಿ ದಿನಾಂಕ 15-4- 2026 ರಂತೆ ಜಾರಿಗೊಳಿಸಲಾಗಿದೆ.ಹಾಗೂ 2970 ಸರಕಾರಿ ಆಸ್ಪತ್ರೆ ಹಾಗೂ 475 ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಪಿಎಂ ರಾಹತ್ ಆರೋಗ್ಯ ಯೋಜನೆಯಡಿ ಸಾರ್ವಜನಿಕರಿಗೆ ಮೋಟಾರ್ ವಾಹನ ಅಪಘಾತ ಕ್ಕೀಡಾದ ಸಂತ್ರಸ್ತರು, ಪೀಡಿಯಾಟ್ರಿಕ್, ಆರ್ತೋಪೆಡಿಕ್ಸ್, ನರ ಶಸ್ತ್ರಚಿಕಿತ್ಸೆ ಬಹು ಗಾಯಗಳ, ಮೂತ್ರಶಾಸ್ತ್ರ, ಹೃದ್ರೋಗ ಶಾಸ್ತ್ರ ಮತ್ತು ಸುಟ್ಟ ಗಾಯಗಳ ಚಿಕಿತ್ಸೆಯಂತಹ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಒಳಗೊಂಡಂತೆ ಸಮಗ್ರ ಆರೋಗ್ಯ ಸೇವೆಗಳನ್ನು ಪಡೆಯಬಹುದು ಎಂದು ಸಚಿವರು ಉತ್ತರಿಸಿದ್ದಾರೆ.
ಅಗತ್ಯ ಪೂರ್ವ ತಯಾರಿ ಜಿಲ್ಲಾ ಮಟ್ಟದಲ್ಲಿ:
ರಾಜ್ಯದಲ್ಲಿ ಪಿಎಂ ರಾಹತ್ ಯೋಜನೆಯನ್ನು ಅನುಷ್ಠಾನ ಮಾಡಲು ಕೈಗೊಂಡ ಪೂರ್ವ ತಯಾರಿಗಳ ಬಗ್ಗೆ ಶಾಸಕರು ಕೇಳಿರುವ ಪೂರಕ ಪ್ರಶ್ನೆಗೆ ಸಚಿವರು ಉತ್ತರಿಸಿ, ದೀರ್ಘಕಾಲದವರಿಗೆ ಐಸಿಯು ಚಿಕಿತ್ಸೆಯ ಅಗತ್ಯವಿರುವ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಮಾತ್ರ ಅನ್ವಯವಾಗುವಂತೆ ಪಿಎಂ ರಾಹತ್ ಮಾರ್ಗಸೂಚಿಗಳ ಪ್ರಕಾರ ನಿಗದಿಪಡಿಸಲಾದ ರೂ. 1,50,000 ಮಿತಿಯ ಹೊರತಾಗಿ ಹೆಚ್ಚುವರಿಯಾಗಿ ಒಂದು ಲಕ್ಷದ ಟಾಪ್ ಅಪ್ ಸೌಲಭ್ಯಗಳನ್ನು ಒದಗಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಪಾಲುದಾರರು E-DAR ತಂಡ ಮತ್ತು ಗೃಹ ಇಲಾಖೆಯಲ್ಲಿ ಸಮನ್ವಯ ಸಭೆಗಳನ್ನು ನಿಯಮಿತ ಅವಧಿಗಳಲ್ಲಿ ನಡೆಸಲಾಗುತ್ತಿದೆ.
ಮುಖ್ಯಮಂತ್ರಿ ಸಾಂತ್ವನ, ಹರೀಶ್ ಯೋಜನೆಯ ಅನ್ವಯ ತಾಂತ್ರಿಕ ತಜ್ಞರ ಸಮಿತಿ ಮತ್ತು ಮೇಲ್ವಿಚಾರಣ ಸಮಿತಿ ಹೀಗೆ ಎರಡು ಸಮಿತಿಗಳನ್ನು ರಚಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಸಂಬಂಧಪಟ್ಟ ಇಲಾಖೆಗಳ ನಡುವೆ ನಿಯಮಿತ ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಗೆ ಸಂಬಂಧಿಸಿ ದಂತೆ ನೋಂದಾಯಿತ ಎಲ್ಲಾ ಆಸ್ಪತ್ರೆಗಳಿಗೆ ತರಬೇತಿಯನ್ನು ನೀಡಲಾಗಿದೆ ಹಾಗೂ ಜಾಗೃತಿ ಚಟುವಟಿಕೆಗಳನ್ನು ರೂಪಿಸಲಾಗಿದೆ. ಈ ಯೋಜನೆಯಲ್ಲಿ ನೋಂದಾವಣೆಗೊಳ್ಳದ ಆಸ್ಪತ್ರೆಗಳಿಗೆ ಯೋಜನೆಯ ಕುರಿತಾದ ತರಬೇತಿಗಳು ಪ್ರಗತಿಯಲ್ಲಿವೆ ಎಂದುತಿಳಿಸಿದ್ದಾರೆ.
ಅಂಕಿ ಅಂಶ:
ದಕ್ಷಿಣ ಕನ್ನಡ ಜಿಲ್ಲೆಯ 91 ಸರಕಾರಿ ಆಸ್ಪತ್ರೆಗಳು ಹಾಗೂ 22 ಖಾಸಗಿ ಆಸ್ಪತ್ರೆಗಳು ಯೋಜನೆ ವ್ಯಾಪ್ತಿಗೆ ಒಳಪಟ್ಟರೆ, ಉಡುಪಿ ಜಿಲ್ಲೆಯ 72 ಸರಕಾರಿ ಆಸ್ಪತ್ರೆಗಳು ಹಾಗೂ 08 ಖಾಸಗಿ ಆಸ್ಪತ್ರೆಗಳು ಸೇರಿವೆ. ಉಡುಪಿಯ ಕೆಎಂಸಿ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಮಹೇಶ್ ಆಸ್ಪತ್ರೆ, ಸರ್ಜನ್ ಆಸ್ಪತ್ರೆ, ಗಜರಿಯ್ ಆಸ್ಪತ್ರೆ ನಿಟ್ಟೆ, ಎ ವಿ ಬಾಳಿಗ ಆಸ್ಪತ್ರೆ, ಮಂಜುನಾಥ ಆಸ್ಪತ್ರೆ, ಹಾಗೂ ಪ್ರಸಾದ್ ನೇತ್ರಾಲಯ ಒಳಗೊಂಡಿದೆ