ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ
ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಗಳಾದ ಬಿ.ಸಿ. ರೋಡು, ಪಾಣೆಮಂಗಳೂರು, ಬಂಟ್ವಾಳ ಹಾಗೂ ಕೈಕಂಬಗಳಂತಹ ಪ್ರದೇಶಗಳಲ್ಲೇ ರಾತ್ರಿ-ಹಗಲೆನ್ನದೆ ಬೀದಿ ನಾಯಿಗಳು ಹಿಂಡು-ಹಿಂಡಾಗಿ ಅಲೆದಾಡುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಅಶಕ್ತರ ಸಹಿತ ಸಾರ್ವಜನಿಕರು ಇಂತಹ ಬೀದಿ ನಾಯಿಗಳಿಂದ ರಕ್ಷಣೆ ಪಡೆಯಲು ಹರಸಾಹಸ ಪಡುವಂತಾಗಿದೆ.
ರಸ್ತೆ ಬದಿಯಲ್ಲಿ ಎಸೆಯಲಾಗುತ್ತಿರುವ ತ್ಯಾಜ್ಯಗಳು ಹಾಗೂ ಇನ್ನಿತರ ಹಳಸಿದ ಆಹಾರಗಳನ್ನು ತಿಂದು ಕೊಬ್ಬಿರುವ ಈ ಬೀದಿ ನಾಯಿಗಳು ಪರಸ್ಪರ ಕಚ್ಚಾಟ ನಡೆಸುತ್ತಾ ರಸ್ತೆ-ಬೀದಿಗಳಲ್ಲೇ ರಂಪಾಟ ನಡೆಸುತ್ತಿರುವುದು ಸರ್ವೇ ಸಾಮಾನ್ಯ ದೃಶ್ಯವಾಗಿದೆ.
ಇಂತಹ ಬೀದಿ ನಾಯಿಗಳು ಕೆಲವೊಮ್ಮೆ ರೌದ್ರಾವತಾರ ತಾಳುತ್ತಿದ್ದು, ಜನರ ಮೇಲೆ ಆಕ್ರಮಣ ಮಾಡುವ ಹಂತಕ್ಕೂ ಬರುತ್ತಿದೆಯಲ್ಲದೆ ಬಂಟ್ವಾಳ ನಗರ ಪ್ರದೇಶದಲ್ಲಿ ಕೆಲ ಬೀದಿನಾಯಿಗಳಂತು ದ್ವಿಚಕ್ರ ವಾಹನ ಸವಾರರನ್ನು,ಕಾರುಗಳನ್ನು ಬೆನ್ನಟ್ಟಿ ಮೈಮೇಲೆ ಎರಗಲು ಮುಂದಾಗುತ್ತಿದೆ.
ದನ, ಆಡು, ಕೋಳಿ ಮೊದಲಾದ ಸಾಕು ಪ್ರಾಣಿಗಳ ಮೇಲೂ ಎರಗುತ್ತಿವೆ. ಈ ಬೀದಿ ನಾಯಿಗಳ ಉಪಟಳದಿಂದ ಶಾಲೆ, ಅಂಗನವಾಡಿ ಮಕ್ಕಳಂತೂ ತೀವ್ರ ಅಪಾಯ ಹಾಗೂ ಆತಂಕದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಈ ಬಗ್ಗೆ ಪುರಸಭೆಗೆ ದೂರು ನೀಡಿದರೆ ಅವರು ಅವರದೇ ಸಮಸ್ಯೆಗಳನ್ನು ಹೇಳಿಕೊಂಡು ಸುಮ್ಮನಾಗುತ್ತಾರೆ. ಬಂಟ್ವಾಳ ಮಾರ್ಕೆಟ್ ರಸ್ತೆಯಲ್ಲಿ ಬೀದಿ ನಾಯಿಗಳಿಗೆ ಕೆಲ ಅಂಗಡಿಉವರು ಬಿಸ್ಕತ್ ಮೊದಲಾದ ಆಹಾರ ಹಾಕುತ್ತಿದ್ದು, ಇದರಿಂದ ನಾಯಿಗಳ ಹಿಂಡು ಅಲ್ಲೇ ಅಲೆದಾಟ ನಡೆಸುತ್ತಿದ್ದು,ದ್ವಿಚಕ್ರ ಸವಾರರನ್ನು ಟಾರ್ಗೆಟ್ ಮಾಡಿ ಹಸಿದ ರಣ ಹದ್ದುಗಳಂತೆ ದಾಳಿಗೆ ಮುಂದಾಗುವುದು ಕಂಡು ಬರುತ್ತಿದೆ.
ಸಂಬಂಧಪಟ್ಟ ಇಲಾಖಾಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.