Chikkamagaluru: ಭರವಸಯಂತೆ 8 ತಿಂಗಳಲ್ಲೇ ಗ್ಯಾರಂಟಿ ಯೋಜನೆಗಳ ಅನುಷ್ಠಾನ

Chikkamagaluru: ಭರವಸಯಂತೆ 8 ತಿಂಗಳಲ್ಲೇ ಗ್ಯಾರಂಟಿ ಯೋಜನೆಗಳ ಅನುಷ್ಠಾನ


ಚಿಕ್ಕಮಗಳೂರು: ರಾಜ್ಯದ ಮಹಿಳೆಯರು ಮತ್ತು ಬಡ ಜನತೆಗೆ ಆರ್ಥಿಕ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಚುನಾವಣೆ ಸಂದರ್ಭದಲ್ಲೇ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು 8 ತಿಂಗಳಲ್ಲೇ ಅನುಷ್ಠಾನಗೊಳಿಸಿದೆ ಎಂದು ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸಭೆ ವತಿಯಿಂದ ಇಂದು ಆಯೋಜಿಸಿದ್ದ ಗ್ಯಾರಂಟಿ ಸಮಾವೇಷದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.

ಕೊರೊನಾ ಸೇರಿದಂತೆ ಹಲವು ಕಾರಣಗಳಿಂದ ದೇಶ ಮತ್ತು ರಾಜ್ಯದ ಜನತೆ ಇಂದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅವರನ್ನು ಅದರಿಂದ ಮೇಲೆತ್ತುವ ಉದ್ದೇಶದಿಂದ ಕಳೆದ ವಿಧಾನಸಭಾ ಚುನಾವಣೆಗೆ ಮುನ್ನವೆ ನಮ್ಮ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ನಂತರ ಈ ಹಿಂದೆ ಘೋಷಣೆ ಮಾಡಿದ್ದ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಇದರಿಂದಾಗಿ ರಾಜ್ಯದ ಮಹಿಳೆಯರು ವಿಶೇಷವಾಗಿ ಬಡಜನತೆ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಂಡಿದ್ದಾರೆ.

ಹಿಂದೆ ಜವಹರ್‌ಲಾಲ್ ನೆಹರು ಮತ್ತು ಇಂದಿರಾಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಜೈಜವಾನ್ ಜೈ ಕಿಸಾನ್ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜನರಿಗಾಗಿ ರೂಪಿಸಿದ್ದರು. ಇಂದಿರಾಗಾಂಧಿಯವರು ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಬಡ ಜನರಿಗೆ ಬಲ ಒದಗಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ಲಕ್ಷದ ಇಪ್ಪತ್ತು ಕೋಟಿ ಹಣವನ್ನು ಬಜೆಟ್‌ನಲ್ಲಿ ಒದಗಿಸಿ ನಂತರ ಆ ಹಣದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಇಂದು ಮಹಿಳೆಯರು ರಾಜ್ಯದೆಲ್ಲೆಡೆ ಸಂಪೂರ್ಣ ಉಚಿತ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಯಾವುದೇ ಹೊರೆಯಾಗುತ್ತಿಲ್ಲ. ಮಹಿಳೆಯರು ಪ್ರಯಾಣಿಸುವ ಸಂಪೂರ್ಣ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದರು.

ಗೃಹಜ್ಯೋತಿ ಯೋಜನೆಯಡಿ ರಾಜ್ಯದ ಬಡ ಜನರಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಬಡ ಜನರು ಇಗಲು ಸಹ ಉಚಿತ ವಿದ್ಯುತ್‌ಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ಒಂದು ಕೋಟಿ ಅರವತ್ತೈದು ಲಕ್ಷ ಫಲಾನುಭವಿಗಳಿದ್ದಾರೆ. ಅವರ ವಿದ್ಯುತ್ ಬಿಲ್ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದ ಅವರು ಗೃಹಲಕ್ಷಿ ಯೋಜನೆಯಲ್ಲಿ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ 2000 ರೂ. ಹಣವನ್ನು ಸರ್ಕಾರ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿಗೆ ಬದಲಾಗಿ 170 ರೂ.ಗಳನ್ನು ನೀಡಲಾಗುತ್ತಿದೆ.

ಯುವನಿಧಿ ಯೋಜನೆಯಡಿ ಪದವಿ ಗಳಿಸಿದ ನಿರುದ್ಯೋಗಿ ಯುವಕರಿಗೆ ತಲಾ 3000 ರೂ. ಹಾಗೂ ಡಿಪ್ಲೋಮಾ ಮಾಡಿದ ಯುವಕರಿಗೆ 1500 ರೂ.ಗಳನ್ನು ನೀಡಲಾಗಿರುತ್ತದೆ. ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಜನಪರ ಯೋಜನೆಗಳನ್ನು ತೆರಿಗೆ ಹಣದಿಂದಲೇ ನೀಡುತ್ತಿದೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಜನಪರವಾಗಿದ್ದು, ಜನರ ಒಳಿತಿಗಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಜನತೆ ಸುಖ, ಸಂತಸ ಮತ್ತು ನೆಮ್ಮದಿಯಿಂದ ಬದುಕುವಂತೆ ಮಾಡುವುದು ರಾಜ್ಯ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಯುವ ಜನತೆಗೆ ಇನ್ನು ಹೆಚ್ಚಿನ ಶಕ್ತಿ ತುಂಬುವ ಚಿಂತನೆ ರಾಜ್ಯ ಸರ್ಕಾರಕ್ಕಿದೆ ಎಂದು ಅವರು ತಿಳಿಸಿದರು.


ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಗೃಹಲಕ್ಷ್ಮೀ ಯೋಜನೆಯ ತಾಲ್ಲೂಕಿನಲ್ಲಿ64867 ಜನರಿಗೆ ಪ್ರತಿ ತಿಂಗಳು 2000 ರೂ.ಗಳನ್ನು ನೀಡಲಾಗುತ್ತಿದೆ. ಉಳಿದವರಿಗೂ ಸಹ ಮುಂದಿನ ದಿನಗಳಲ್ಲಿ ನೀಡಲಾಗುವುದು. ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 8 ತಿಂಗಳ ಅವಧಿಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ದೇಶದಲ್ಲೇ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರು.


ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ನೀಡಲು ಹೆಜ್ಜೆ ಹಾಕುತ್ತಿದೆ. ರಾಜ್ಯ ಸರ್ಕಾರ ಐದು ಯೋಜನೆಗಳನ್ನು ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳು ತಂಡೋಪಾದಿಯಲ್ಲಿ ಕೆಲಸ ಮಾಡುವ ಮೂಲಕ ಸಮಪರ್ಕವಾಗಿ ಜಾರಿಗೊಳಿಸಿದ್ದಾರೆ. ಹಾಗಾಗಿ ಎಲ್ಲಾ ಕುಟುಂಬಗಳಿಗೆ ಈ ಯೋಜನೆಗಳು ತಲುಪಲು ಸಾಧ್ಯವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಜಾರಿಗೆ ಇರುವ ಕುಂದು ಕೊರತೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೆ ಎಲ್ಲಾ ಹಣವನ್ನು ಫಲಾನುಭವಿಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್, ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article