
Chikkamagaluru: ಕರ್ಕೇಶ್ವರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ
ಚಿಕ್ಕಮಗಳೂರು: ಸಂವಿಧಾನ ಜಾಗೃತಿ ಜಾಥಾವು ಇಂದು ನರಸಿಂಹರಾಜಪುರ ತಾಲ್ಲೂಕಿನಲ್ಲಿ ಸಂಚರಿಸುತ್ತಿದ್ದು, ನರಸಿಂಹರಾಜಪುರ ತಾಲ್ಲೂಕಿನ ಕರ್ಕೇಶ್ವರ, ಸೀತೂರು, ಹೇರೂರು, ಮಾಗುಂಡಿ, ಬನ್ನೂರು ಹಾಗೂ ಬಿ.ಕಣಬೂರು ನರಸಿಂಹರಾಜಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿತು.
ಪ್ರಥಮವಾಗಿ ಕರ್ಕೇಶ್ವರ ಗ್ರಾಮ ಪಂಚಾಯಿತಿಗೆ ಆಗಮಿಸಿದ ಜಾಗೃತಿ ರಥ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ದಲಿತ ಮುಖಂಡರು, ಶಿಕ್ಷಕರು, ಶಾಲಾ ಮಕ್ಕಳು, ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು ಮತ್ತು ಸಾರ್ವಜನಿಕರು ಸಂಭ್ರಮದಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಪುಷ್ಪಾರ್ಚನೆ ಮಾಡಿದರು.
ಶಾಲಾ ಮಕ್ಕಳು ಡ್ರಂಸೆಟ್ ವಾದ್ಯ, ಪಥಸಂಚಲನ ಹಾಗೂ ಛದ್ಮವೇಷದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಮುಖ್ಯೋಪಾಧ್ಯಯರಿಂದ ಸಂವಿಧಾನ ಪೀಠಿಕೆ ಭೋದಿಸಲಾಯಿತು. ಕಲಾವಿದರುಗಳು ಅಂಬೇಡ್ಕರ್ ಗೀತೆ ಹಾಡಿದರು. ವಿದ್ಯಾರ್ಥಿಗಳು ಲೆಜಿಮ್ಸ್ ನೃತ್ಯ, ಲಾವಣಿ ಪದ ಹಾಗೂ ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ಕರ್ಕೆಶ್ವರ ಗ್ರಾಮ ಪಂಚಾಯತ್ ಶಿಕ್ಷಕರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್‌ರವರು ದೇಶಕ್ಕೆ ಒಳ್ಳೆಯ ಸಂವಿಧಾನವನ್ನು ರಚನೆ ಮಾಡಿಕೊಟ್ಟಿದ್ದಾರೆ. ಭಾರತವನ್ನು ಸಮಾಜವಾದಿ, ಪ್ರಜಾಸತ್ತಾತ್ಮಕ ಹಾಗೂ ಬಲಾಡ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಈ ಸಂವಿಧಾನ ಉಪಯೋಗವಾಗಿದೆ ಎಂದು ಹೇಳಿದರು.