
Mangalore: ಮೂವರಿಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ
Friday, February 9, 2024
ಹೊಸದಿಲ್ಲಿ: ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್, ಚೌಧುರಿ ಚರಣ್ ಸಿಂಗ್ ಹಾಗೂ ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಮರಣೋತ್ತರ ಭಾರತ ಸರ್ಕಾರ ‘ಭಾರತ ರತ್ನ’ ಪ್ರಶಸ್ತಿಯನ್ನು ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಪ್ರಧಾನಮಂತ್ರಿಗಳು, ಪಿ.ವಿ. ನರಸಿಂಹ ರಾವ್ ಅವರ ದೂರದೃಷ್ಟಿಯ ನಾಯಕತ್ವ ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಿತ್ತು ಹಾಗೂ ದೇಶದ ಪ್ರಗತಿ ಮತ್ತು ಸಮೃದ್ಧಿಗೆ ಭದ್ರ ಅಡಿಪಾಯ ಹಾಕಿತ್ತು ಎಂದು ತಿಳಿಸಿದ್ದಾರೆ.
ಒಬ್ಬ ರಾಜಕೀಯ ಮುತ್ಸದ್ದಿಯಾಗಿ ನರಸಿಂಹ ರಾವ್ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಸಂಸದರಾಗಿ ಅವರ ಸೇವೆ ಸ್ತುತ್ಯಾರ್ಹ.
ಎಂ.ಎಸ್. ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿರುವ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು ದೇಶದ ಕೃಷಿ ಕ್ಷೇತ್ರಕ್ಕೆ ಮತ್ತು ಕೃಷಿಕರ ಕಲ್ಯಾಣಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಳನ್ನು ಶ್ಲಾಘಿಸಿದ್ದು, ಅವರ ಪರಿಶ್ರಮದಿಂದ ಭಾರತದಲ್ಲಿ ಆಹಾರ ಭದ್ರತೆಗೆ ದೊಡ್ಡ ಕೊಡುಗೆ ದೊರೆತಿದೆ ಎಂದು ಟ್ವಿಟ್‌ನಲ್ಲಿ ತಿಳಿಸಿದ್ದಾರೆ.