
ಫೆ.12: ಕುಂದಾಪುರ ಶ್ರೀ ಮಹಾಕಾಳಿ ದೇಗುಲದ ಪ್ರತಿಷ್ಠಾ ವರ್ಧಂತಿ ಮಹೋತ್ಸವ
ಕುಂದಾಪುರ: ಇಲ್ಲಿನ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ 34ನೇ ವರ್ಷದ ಪ್ರತಿಷ್ಟಾ ವರ್ಧಂತಿ ಮಹೋತ್ಸವವು ಫೆ.12 ರಂದು ನಡೆಯಲಿದೆ.
ಅಂದು ಬೆಳಿಗ್ಗೆ 6.30ಕ್ಕೆ ಗಣಪತಿ ಪೂಜೆ, ಮಹಾ ಸಂಕಲ್ಪ, ಪುಣ್ಯಾಹ, ಅಧಿವಾಸ ಹೋಮ, ಅಶ್ವಥ ವೃಕ್ಷ ಪೂಜೆ, ಶ್ರೀ ನಾಗದೇವರಿಗೆ ಕಲಶಾಭಿಷೇಕ, ಚಂಡಿಕಾಹೋಮ, ಬ್ರಹ್ಮಕಲಶಾಭಿಷೇಕ ನಡೆಯಲಿರುವುದು.
ಬೆಳಿಗ್ಗೆ ಘಂಟೆ 11.20ರ ಸುಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ನೂತನ ದಾರು ಬಿಂಬಕ್ಕೆ 'ರಜತ ಧಾರಣೆ', ಪಂಚಲೋಹದ ನೂತನ 'ದ್ವಾರ ಪಾಲಕ ವಿಗ್ರಹ ಪ್ರತಿಷ್ಠೆ' ಹಾಗೂ ಗರ್ಭಗುಡಿಯ ಪ್ರಧಾನ ಗೋಡೆಗೆ ಕಲಾತ್ಮಕ ಮಾದರಿಯ 'ಹಿತ್ತಾಳೆ ಕವಚ' ಅಳವಡಿಸಿ ಸಮರ್ಪಣೆ ನಡೆಯಲಿದೆ.
ನಂತರ ಮಹಾಪೂಜೆ, ಮಂತ್ರಾಕ್ಷತೆ, ಪಲ್ಲಪೂಜೆ, ತೀರ್ಥ, ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ 1 ಗಂಟೆಗೆ ಸೇವಾ ಕರ್ತರಿಂದ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿರುವುದು.
ಸಂಜೆ 6 ಗಂಟೆಗೆ 'ವಿಶೇಷ ರಂಗಪೂಜೆ' ಜರುಗಲಿರುವುದು. ಹಾಗೂ ವಾರ್ಷಿಕವಾಗಿ ಜರುಗುವ ಅಮ್ಮನವರ ಪುಷಾಲಂಕೃತ ಪಲ್ಲಕ್ಕಿ ಉತ್ಸವದ ಪುರ ಮೆರವಣಿಗೆಯು ಕುಂದಾಪುರ ಮುಖ್ಯ ರಸ್ತೆ ಮಾರ್ಗವಾಗಿ ಪಾರಿಜಾತ ಸರ್ಕಲ್ ನಿಂದ ತಿರುಗಿ ಶ್ರೀ ನಾಗಜಟ್ಟಿಗೇಶ್ವರ ದೇವಸ್ಥಾನ ಖಾರ್ವಿ ಮೇಲ್ಕೇರಿಗೆ ಚಿತ್ತೈಸುವಿಕೆ, ವಿಶೇಷ ಪೂಜೆ. ದೇವಳದ ಅಧ್ಯಕ್ಷರಿಂದ ಶುಭ ಹಾರೈಕೆ, ಅರ್ಚಕರಿಂದ ಆಶೀರ್ವಚನ, ಪ್ರಸಾದ ವಿತರಣೆ ಬಳಿಕ ಸಂಪ್ರೋಕ್ಷಣೆಗೊಳ್ಳಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.