Chikkamagaluru: ಪಿ.ಎಂ. ವಿಶ್ವಕರ್ಮ ಯೋಜನೆ ಕಾರ್ಯಗಾರ
ಕರಕುಶಲ ಕರ್ಮಿಗಳು ಆಧುನಿಕ ಯಂತ್ರೋಪಕರಣ ಬಳಕೆಯಿಂದ ಅಧಿಕ ಉತ್ಪಾದನೆ
ಚಿಕ್ಕಮಗಳೂರು: ಕರಕುಶಲ ಕರ್ಮಿಗಳು ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಉತ್ಪಾದಿಸಿ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಂತ್ರಾಲಯ, ಬೆಂಗಳೂರು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಒಂದು ದಿನದ ಪಿ.ಎಂ. ವಿಶ್ವಕರ್ಮ ಯೋಜನೆಯ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿ.ಎಂ. ವಿಶ್ವಕರ್ಮ ಯೋಜನೆಯು ನಗರ, ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಕುಶಲ ಕರ್ಮಿಗಳು ಮತ್ತು ಕರಕುಶಲ ಜನರಿಗೆ ಕೌಶಲ್ಯ ತರಬೇತಿ, ಆಧುನಿಕ ಉಪಕರಣಗಳು ಡಿಜಿಟಲ್ ವಹಿವಾಟು ಮತ್ತು ಮಾರುಕಟ್ಟೆಗೆ ಪ್ರೋತ್ಸಾಹದ ಮೂಲಕ ಸಮಗ್ರ ಮತ್ತು ಅಂತ್ಯದ ಬೆಂಬಲವನ್ನು ಒದಗಿಸುವ ಈ ಯೋಜನೆಯನ್ನು ಕುಶಲ ಕರ್ಮಿ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕರಕುಶಲ ಕರ್ಮಿಗಳಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿಯೊಂದಿಗೆ ಮಾನ್ಯತೆ ನೀಡಲಾಗುತ್ತದೆ. ಯೋಜನೆಯ ಪ್ರಯೋಜನವನ್ನು ಪ್ರತಿಯೊಂದು ಕುಶಲ ಕರ್ಮಿಗಳು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಕರಕುಶಲ ಕರ್ಮಿಗಳು ಪಿ.ಎಂ. ವಿಶ್ವಕರ್ಮ ಯೋಜನೆಯ ಸದುಪಯೋಗ ಪಡೆದುಕೊಂಡು ವಿಶೇಷ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ತರುವುದರಿಂದ ತಾವು ತಯಾರಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ. ಈ ಯೋಜನೆಯಡಿ 18 ವಿವಿಧ ವೃತ್ತಿಗಳನ್ನು ನಡೆಸುತ್ತಿರುವ ಕುಶಲಕರ್ಮಿಗಳಿಗೆ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು ಮಾತನಾಡಿ, ಪಿ.ಎಂ. ವಿಶ್ವಕರ್ಮ ಯೋಜನೆಯಡಿ ನೊಂದಾಯಿಸಿಕೊಂಡ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಮುಂದೆ ಬರಬೇಕು. ಜಿಲ್ಲೆಯಲ್ಲಿ ಈಗಾಗಲೇ 22,512 ಜನರು ನೊಂದಾಯಿಸಿಕೊಂಡಿದ್ದು, ಇವರಲ್ಲಿ ಶೇ. 62 ರಷ್ಟು ಮಹಿಳೆಯರು ನೊಂದಾಯಿಸಿಕೊಂಡಿದ್ದಾರೆ. ಈ ಯೋಜನೆಯಡಿ ಆಧಾರರಹಿತ ಸಾಲವನ್ನು ಶೇ.5 ರ ಬಡ್ಡಿ ದರದಲ್ಲಿ ವಿವಿಧ ಬ್ಯಾಂಕ್‌ಗಳಿಂದ ನೀಡಲಾಗುವುದು. ಮಾರುಕಟ್ಟೆ ಸೌಲಭ್ಯ, ಡಿಜಿಟಲ್ ವಹಿವಾಟಿಗೆ ಸಹಾಯಧನ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಪ್ರಶಾಂತ್ ಮಾತನಾಡಿ, ಒಂದು ಕುಟುಂಬಕ್ಕೆ ಒಬ್ಬರಂತೆ ಹಾಗೂ ಆ ಕುಟುಂಬದಲ್ಲಿ ಸರ್ಕಾರಿ ನೌಕರಿಯಲ್ಲಿ ಇಲ್ಲದೆ ಇರುವ ಕುರಿತು ಖಾತರಿ ಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಲಾಗುತ್ತದೆ. ಅವರಿಗೆ ಮೊದಲನೆ ಹಂತದಲ್ಲಿ ಪಿ.ಎಂ. ವಿಶ್ವಕರ್ಮ ಪ್ರಮಾಣ ಪತ್ರ ಹಾಗೂ ಡಿಜಿಟಲ್ ಗುರುತಿನ ಚೀಟಿ ನೀಡಲಾಗುತ್ತದೆ. ಐದು ದಿನಗಳ ಕೌಶಲ್ಯ ವರ್ಧನೆಗೆ ಸಂಬಂಧಿಸಿದ ತರಬೇತಿ ನೀಡಿ ತರಬೇತಿ ಅವಧಿಯಲ್ಲಿ ಪ್ರತಿ ದಿನ 500 ರೂ. ಶಿಷ್ಯ ವೇತನ ನೀಡಲಾಗುವುದಲ್ಲದೆ. ತರಬೇತಿಯ ಕೊನೆ ದಿನ 15,000 ರೂ.ಗಳ ಮೌಲ್ಯದ ವೃತ್ತಿಗೆ ಸಂಬಂಧಿಸಿದ ಸುಧಾರಿತ ಉಪಕರಣಗಳನ್ನು ಉಚಿತವಾಗಿ ನೀಡಲಾಗುವುದು. ಅವಶ್ಯವಿರುವ ಫಲಾನುಭವಿಗಳಿಗೆ ಒಂದು ಲಕ್ಷದವರೆಗೆ ಯಾವುದೇ ಅಡಮಾನ ಪಡೆಯದೆ ಶೇ.5 ರ ಬಡ್ಡಿ ದರದಲ್ಲಿ ಬ್ಯಾಂಕಿನ ಮೂಲಕ ಸಾಲ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಗಾರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಂತ್ರಾಲಯದ ಕೆ. ಸಾಕ್ರಟೀಸ್, ಉಪನಿರ್ದೇಶಕ ಗೋಪಿನಾಥ್ ರಾವ್, ಸಹಾಯಕ ನಿರ್ದೇಶಕ ಬಿ.ಎಸ್. ಹೊಸಮನಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎನ್. ಚಂದ್ರಶೇಖರ್, ಉಪನಿರ್ದೇಶಕ ರವಿಪ್ರಸಾದ್, ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕ ವಿ. ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.



