Kundapura: ಫೆ.20-23: ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪುನರ್ ಪ್ರತಿಷ್ಠೆ-ಅಷ್ಟಬಂಧ ಬ್ರಹ್ಮ ಕಲಶೋತ್ಸವ
ಕುಂದಾಪುರ: ಇಲ್ಲಿನ ಚಿಕ್ಕನ್ಸಾಲ್ ರಸ್ತೆಯಲ್ಲಿರುವ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಪುನರ್ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆಯ ಕಾರ್ಯಕ್ರಮವು ಫೆ.20 ರಿಂದ ಫೆ.೨೩ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗುರು ಪರಾಶಕ್ತಿ ಮಠ-ಮರಕಡದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಗಳ ಆಶೀರ್ವಾದದೊಂದಿಗೆ ಕೋಟ ಕೆ. ಚಂದ್ರಶೇಖರ್ ಸೋಮಯಾಜಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಫೆ.20 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಗಣಯಾಗ, ಗುರು ಸನ್ನಿಧಿಯಲ್ಲಿ ನವಕ ಪ್ರಧಾನ ಕಲಾವೃದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ಶ್ರೀ ಬಗಳಾಂಬಾ ತಾಯಿಯ ಕಲಾಸಂಕೋಚ ನಡೆಯಲಿದೆ.
ಫೆ.21 ರಂದು ಬೆಳಿಗ್ಗೆ ಪುಣ್ಯಾಹ, ಬಿಂಬ ಶುದ್ದಿ, ಜಲಾಧಿವಾಸ, ಸಪರಿವಾರ ದೇವರಾದ ಶ್ರೀ ಕಾಲಭೈರವೇಶ್ವರ, ಶ್ರೀ ಆಂಜನೇಯ ಮತ್ತು ಶ್ರೀ ನಾಗ ದೇವರಿಗೆ ಕಲಶಾಭಿಷೇಕ, ಸತ್ಯನಾರಾಯಣ ಪೂಜೆ ನಡೆಯಲಿದೆ. ಸಂಜೆ 6 ಗಂಟೆಗೆ ಪುಣ್ಯಾಹ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ, ಶಯ್ಯಾ ಕಲ್ಪನೆ, ಪ್ರತಿಷ್ಠಾಧಿವಾಸ ಹೋಮಗಳು ನಡೆಯಲಿರುವುದು.
ರಾತ್ರಿ ೮ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಮೇಜಿಂಗ್ ಸ್ಟೆಪರ್ಸ್ ಕಂಚುಗೋಡು-ತ್ರಾಸಿ ಅವರಿಂದ ಭಕ್ತಿ-ಭಾವ-ನಾಟ್ಯ ಕಾರ್ಯಕ್ರಮ ನಡೆಯಲಿದೆ.
ಫೆ.22 ರಂದು ಪುಣ್ಯಾಹ, ಬೆಳಿಗ್ಗೆ 5.20ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ರತ್ನನ್ಯಾಸಪೂರ್ವಕ ‘ಶ್ರೀ ಬಗಳಾಂಬ ತಾಯಿಯ ಪುನರ್ ಪ್ರತಿಷ್ಠೆ’, ಜೀವ ಕುಂಭಾಭಿಷೇಕ, ಪ್ರಾಣ ಪ್ರತಿಷ್ಠೆ, ಕಲಾಭಿವೃದ್ಧಿ ಹೋಮ, ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಹಾಗೂ ಮಧ್ಯಾಹ್ನ 12.30ಕ್ಕೆ ‘ಅನ್ನ ಸಂತರ್ಪಣೆ’ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಪುಣ್ಯಾಹ, ಶಾಂತಿಹೋಮ, ನವೋತ್ತರ ದ್ರವ್ಯಕಲಶಪೂರಿತ ಬ್ರಹ್ಮಕಲಶ ಸ್ಥಾಪನೆ, ಪ್ರದಾನಾಧಿವಾಸ ಹೋಮ ನಡೆಯಲಿದ್ದು, ರಾತ್ರಿ 8 ಗಂಟೆಗೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಚಕ್ರ-ಚಂಡಿಕೆ’ ಯಕ್ಷಗಾನ ಪ್ರಸಂಗ ನಡೆಯಲಿದೆ.
ಫೆ.23 ರಂದು ಬೆಳಿಗ್ಗೆ 8 ಗಂಟೆಗೆ ಪುಣ್ಯಾಹ, ಚಂಡಿಕಾಯಾಗ, ‘ಬ್ರಹ್ಮಕಲಶಾಭಿಷೇಕ’, ‘ಪಲ್ಲಪೂಜೆ’, ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಬಳಿಕ 1 ಗಂಟೆಗೆ ಸೇವಾ ಕರ್ತರಿಂದ ಸಾರ್ವಜನಿಕ ‘ಮಹಾ ಅನ್ನಸಂತರ್ಪಣೆ’ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಗೆ ಶ್ರೀ ಮಾಸ್ತಿಯಮ್ಮ ಭಜನಾ ಮಂಡಳಿ-ಮದ್ದುಗುಡ್ಡೆ ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಹೂವಿನ ಪೂಜೆ, ವಿಶೇಷ ರಂಗಪೂಜೆ ಜರುಗಲಿದ್ದು, ರಾತ್ರಿ 8 ಗಂಟೆಗೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.