.jpeg)
Mangalore: ಕಾಂಗ್ರೆಸ್ ನಡೆಗೆ ಉಗ್ರ ಖಂಡನೆ
Thursday, February 8, 2024
ಮಂಗಳೂರು: ದ.ಕ. ಜಿಲ್ಲಾ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಮನೆಗೆ ಕಾಂಗ್ರೆಸ್‌ನ ಎನ್‌ಎಸ್‌ಯುಐ ಸಂಘಟನೆಯು ಮುತ್ತಿಗೆ ಹಾಕಿದ್ದು, ಇದನ್ನು ದ.ಕ. ಜಿಲ್ಲಾ ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.
ಅವರು ಫೆ.೮ ರಂದು ನಗರದ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕಾಂಗ್ರೆಸ್ ದಬ್ಬಳಿಕೆಯ ಮತ್ತು ಅರಾಜಕತೆಯ ಆಡಳಿತವನ್ನು ನಡೆಸುತ್ತಿದ್ದು, ಸಣ್ಣ ಪುಟ್ಟ ಗೂಂಡಾಗಳನ್ನು ಬಿಟ್ಟು ಸಂಸದರ ಮನೆಗೆ ಮುತ್ತಿಗೆ ಹಾಕಿಸಿದ್ದಾರೆ. ಸಂಸದರ ಮನೆಯ ಸುತ್ತಲೂ ನಿವೇಶನಗಳಿದ್ದು, ಮಾತ್ರವಲ್ಲ ಸಂಸದರ ಮನೆಯವರೂ ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಮುತ್ತಿಗೆ ಹಾಕಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ೮ ತಿಂಗಳು ಕಳೆದರೂ ಅಧಿಕಾರ ಮಾಡುತ್ತಿಲ್ಲ, ಗ್ಯಾರಂಟಿಗಳನ್ನು ಜಾರಿ ಮಾಡುತ್ತಿಲ್ಲ. ಯಾವುದೇ ಕೆಲಸ ಮಾಡದೇ ಆನ್‌ಲೈನ್ ಸರಿ ಇಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದು, ಡೊಂಬರಾಟದ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ನಳೀನ್ ಕುಮಾರ್ ಕಟೀಲ್ ಅವರು ಮೂರು ಅವಧಿಗೆ ಸಂಸದರಾಗಿದ್ದು, ಜಿಲೆಗೆ ೧ ಲಕ್ಷ ಕೋಟಿಗೂ ಹೆಚ್ಚು ಅನುದಾನವನ್ನು ತಂದಿದ್ದು, ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಬಂದರು, ಸ್ಮಾರ್ಟ್‌ಸಿಟಿ, ವಿಮಾನ ನಿಲ್ದಾಣದ ಅಭಿವೃದ್ಧಿ ಮೊದಲಾದ ಕೆಲಸಕ್ಕೆ ಅನುದಾನವನ್ನು ತಂದಿದ್ದು ಮಾತ್ರವಲ್ಲದೇ ಪ್ರಧಾನಮಂತ್ರಿಗಳ ಯೋಜನೆಯಂದಲೂ ಅನುದಾನವನ್ನು ತಂದು ಕೆಲಸ ಮಾಡಿದ್ದಾರೆ ಎಂದರು.
ನಮ್ಮಲ್ಲೂ ಯುವಕರು, ವಿದ್ಯಾರ್ಥಿಗಳು ಇದ್ದಾರೆ:
ಕಾಂಗ್ರೆಸ್ ಪಕ್ಷ ಯುವಕರನ್ನು ಬಿಟ್ಟು ಈ ರೀತಿಯ ಕೃತ್ಯಗಳನ್ನು ಎಸಗುತ್ತಿದೆ. ಮತ್ತೊಮ್ಮೆ ಸಂಸದರ, ಶಾಸಕರುಗಳ ಮನೆಗೆ ಮುತ್ತಿಗೆ ಹಾಕುವಂತಹ ಕೆಲಸ ಮಾಡಿದರೆ ನಮ್ಮಲ್ಲಿಯೂ ಯುವ ಮೋರ್ಚಾ, ವಿದ್ಯಾರ್ಥಿ ಸಂಘಟನೆ ಇದೆ ನಾವು ಅದಕ್ಕೆ ಪ್ರತಿ ಉತ್ತರ ನೀಡಬೇಕಾದೀತು ಎಂದು ಕುಂಪಲ ಎಚ್ಚರಿಸಿದರು.
ಸುಳ್ಯದಲ್ಲಿ ಬೀಗ ಹಾಕಿಲ್ಲ:
ಸುಳ್ಯದಲ್ಲಿರುವ ಬಿಜೆಪಿ ಕಾರ್ಯಾಲಯಕ್ಕೆ ಬಿಜೆಪಿ ಕಾರ್ಯಕರ್ತರೇ ಬೀಗ ಹಾಕಿ ಮುತ್ತಿಗೆ ಹಾಕಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಅಲ್ಲಿಗೆ ಭೇಟಿ ನೀಡಿ ಸಭೆ ನಡೆಸಿದ್ದೇನೆ ಅಂತಹ ಯಾವುದೇ ಘಟನೆ ನಡೆದಿಲ್ಲ. ಎಲ್ಲವೂ ಸರಿ ಇದೆ ಎಂದರು.
ನಮಗೆ ಎಲ್ಲರೂ ಬೇಕು:
ಅರುಣ್ ಪುತ್ತೀಲ ಅವರ ಗಡುವಿನ ಬಗ್ಗೆ ಪ್ರತಿಕ್ರಿಯಿಸಿದ ಕುಂಪಲ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮ ಪಕ್ಷಕ್ಕೆ ಎಲ್ಲರೂ ಬೇಕು. ಅರುಣ್ ಕುಮಾರ್ ಪುತ್ತೀಲ ಅವರ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ, ರಾಜ್ಯದ ನಾಯಕರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಪ್ರಮುಖರಾದ ಪ್ರಮಾನಂದ ಶೆಟ್ಟಿ, ಕಿಶೋರ್ ಕುಮಾರ್, ನಂದನ್, ಮಂಜುಳಾ ಮತ್ತಿತರರು ಇದ್ದರು.