
Moodubidire: ಭಾರತೀಯ ಕಿಸಾನ್ ಸಂಘದಿಂದ ಸದಸ್ಯತ್ವ ಅಭಿಯಾನ ಮತ್ತು ಕಾರ್ಡ್ ಚಳವಳಿ
ಮೂಡುಬಿದಿರೆ: ಭಾರತೀಯ ಕಿಸಾನ್ ಸಂಘದ ಸದಸ್ಯತ್ವ ಅಭಿಯಾನವನ್ನು ಮತ್ತು ಪುರಸಭೆಯ 3 ಕಿ.ಮೀ. ವಾಯು ವ್ಯಾಪ್ತಿಯ ಸರಕಾರಿ ಭೂಮಿಯಲ್ಲಿ ಕೃಷಿ ಮಾಡಿರುವ ರೈತರಿಗೆ ಅಕ್ರಮ- ಸಕ್ರಮೀಕರಣ ಕಾಯ್ದೆಯನ್ವಯ ಯಾವುದೇ ಆಸ್ತಿಯನ್ನು ಯಾರಿಗೂ ಮಂಜೂರು ಮಾಡುವಂತಿಲ್ಲವೆಂಬ ಕಾಯ್ದೆಗೆ ತಿದ್ದುಪಡಿ ತರುವಂತೆ ಸರಕಾರವನ್ನು ಒತ್ತಾಯಿಸಿ ಕಾರ್ಡ್ ಚಳವಳಿಯನ್ನು ಪ್ರಾರಂಭಿಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ.
ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಸದಸ್ಯತ್ವ ಅಭಿಯಾನ ಮತ್ತು ಕಾರ್ಡ್ ಅಭಿಯಾನದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಮೂಡುಬಿದಿರೆ ತಾಲೂಕಿನ ರೈತ ಕುಟುಂಬದಿಂದ ಒಬ್ಬರಂತೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರಿಗೆ, ವಿಪಕ್ಷ ನಾಯಕರಿಗೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರಿಗೆ ರೈತರ ಬೇಡಿಕೆಗಳ ಬಗ್ಗೆ ಕಾರ್ಡ್ ಮೂಲಕ ಮನವಿಯನ್ನು ಕಳುಹಿಸಲಾಗುವುದು. ಅಕ್ರಮ-ಸಕ್ರಮೀಕರಣದಲ್ಲಿ ಮಂಜೂರಾತಿಗೆ ಇರುವ ಮೇಲ್ಕಾಣಿಸಿದ ನಿರ್ಬಂಧವನ್ನು ತೆಗೆದುಹಾಕುವ ಬಗ್ಗೆ ಕಾನೂನಿಗೆ ತಿದ್ದುಪಡಿ ತರಬೇಕೆಂಬುದು ರೈತ ಹಕ್ಕೊತ್ತಾಯವಾಗಿದೆ ಎಂದರು.
60 ವರ್ಷ ಮೇಲ್ಪಟ್ಟ ರೈತರಿಗೆ 10 ಸಾವಿರ ಮಾಸಾಶನ ನೀಡುವಂತೆ ಮತ್ತು ರೈತರ ಮಕ್ಕಳಿಗೆ ವೃತ್ತಿಪರ ಕೋರ್ಸಿಗೆ ಉಚಿತ ಶಿಕ್ಷಣ ನೀಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಪ್ರಧಾನಮಂತ್ರಿಯವರಿಗೆ ತಾಲೂಕಿನಿಂದ 10 ಸಾವಿರ ರೈತರು ತಮ್ಮ ಮನವಿಯನ್ನು ಅಂಚೆ ಕಾರ್ಡ್ ಮೂಲಕ ಕಳುಹಿಸಲಾಗುವುದು ಎಂದರು.
ಕಾರ್ಡ್ ಚಳವಳಿ ಮತ್ತು ಭಾರತೀಯ ಕಿಸಾನ್ ಸಂಘದ ಸದಸ್ಯತ್ವ ಅಭಿಯಾನವು ಮಾರ್ಚ್ ತಿಂಗಳ 15 ರವರೆಗೆ ಮೂಡುಬಿದಿರೆ ತಾಲೂಕಿನಲ್ಲಿ ನಡೆಯಲಿದೆ. ಮೂಡುಬಿದಿರೆ ತಾಲೂಕಿನಲ್ಲಿ 10 ಸಾವಿರ ಸದಸ್ಯತ್ವ ಮಾಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ, ಮುಖಂಡರುಗಳಾದ ಸುಬ್ರಾಯ, ತಾಲೂಕು ಉಪಾಧ್ಯಕ್ಷ ವಲೇರಿಯನ್ ಕುಟಿನ್ಹ, ಸದಸ್ಯತ್ವ ಅಭಿಯಾನದ ಸಂಚಾಲಕ ರೊನಾಲ್ಡ್ ಸೆರಾವೋ ಮತ್ತು ಸಹ ಸಂಚಾಲಕ ರಾಧಾಕೃಷ್ಣ ಶೆಟ್ಟಿ ಮಾರ್ಪಾಡಿ, ಜಯಾನಂದ, ವಸಂತ್ ಕುಮಾರ್, ನೇಮಿರಾಜ್, ಲಾಯ್ಡ್, ನಾಗವರ್ಮ ಜೈನ್, ಚಂದ್ರಶೇಖರ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.