Article: ಜಗತ್ತಿನಲ್ಲಿ ಪ್ರಕೃತಿಗಿಂತಲೂ ಆಪ್ತ ಸಖ ಮತ್ತೊಬ್ಬ ಸಿಗಲಾರ

Article: ಜಗತ್ತಿನಲ್ಲಿ ಪ್ರಕೃತಿಗಿಂತಲೂ ಆಪ್ತ ಸಖ ಮತ್ತೊಬ್ಬ ಸಿಗಲಾರ


ಮುಂಜಾನೆಯ ಬೆಳಕು ನೋಡಿ ಆಗುವ ಖುಷಿ, ಹಕ್ಕಿಯ ಚಿಲಿಪಿಲಿ ನಾದ ಕೇಳಿದಾಗ ಆಗುವ ಆನಂದ, ಆಕಾಶದಲ್ಲಿ ಹೊಳೆಯುವ ಆ ನಕ್ಷತ್ರಗಳು, ಸುತ್ತಮುತ್ತಲಿನ ಗಿಡ-ಮರಗಳಿಂದ ಬರುವ ತಂಪಾದ ಗಾಳಿ ಬೀಸುತ್ತಿರುವಾಗ ತಣ್ಣಗೆ ನಡುಗುವ ಮೈ ಇದೆಲ್ಲವೂ ರೋಮಾಂಚನವನ್ನುಂಟು ಮಾಡುತ್ತದೆ. ಇವೆಲ್ಲವನ್ನು ನೋಡಿ ಅನುಭವಿಸುವಾಗ ಏನೇನೋ ಆಲೋಚನೆಗಳು ನೆನಪಿನ ಆಳದಿಂದ ಮೇಲೆದ್ದುಬರುವಾಗ ಮುಖದಲ್ಲಿ ಕಾಣಿಸುವ ಆ ಚಿಕ್ಕ ಮುಗುಳುನಗೆ ಅದೆಷ್ಟು ಚೆಂದ. 

ಆ ಮುಂಜಾನೆಯ ಬೆಳಕಿನ ತಂಪಿಗೆ ಅರಳಿದ ಹೂಗಳನ್ನು ನೋಡಲು ಅದೆಷ್ಟು ಚೆಂದ. ಆ ಹೂವುಗಳಿಂದ ಬರುವ ಸುವಾಸನೆ, ಆ ಸುವಾಸನೆಗೆ ಆಕರ್ಷಿತವಾಗಿ ಬರುವ ಹಕ್ಕಿಗಳ ಹಿಂಡು, ಚಿಟ್ಟೆಗಳು ಅತ್ತ ಇತ್ತ ಹಾರುವುದನ್ನು ನೋಡುವುದೇ ಬಲು ಆನಂದವನ್ನು ನೀಡುತ್ತದೆ. ಮನ ತುಂಬಿ ಈ ಪ್ರಕೃತಿಯನ್ನು ನೋಡುತ್ತಿದ್ದರೆ ಮನುಷ್ಯನಿಗಿರುವ ಎಲ್ಲಾ ನೋವನ್ನು ಮರೆಸಿ, ಎಲ್ಲಾ ಬೇಸರವನ್ನು ಒಮ್ಮೆಲೇ ದೂರ ಮಾಡಿಬಿಡುತ್ತದೆ. ಮನಸ್ಸಿಗೆ ಅದೇನೋ ಒಂಥರಾ ಸಮಾಧಾನ ಅನಿಸುತ್ತದೆ. 

ಸಾಮಾನ್ಯವಾಗಿ ವ್ಯಕ್ತಿ ತನ್ನ ಆಪ್ತರೊಂದಿಗೆ ಸುಖ, ದುಃಖ ಎಲ್ಲವನ್ನೂ ಹಂಚಿಕೊಂಡರೆ ಮನಸ್ಸಿಗೆ ಸಮಾಧಾನ ಎನಿಸುತ್ತದೆ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ನಮ್ಮ ಅದ್ಯಾವ ಮಾತನ್ನೂ ಕೇಳುವ ಕಿವಿ ಇಲ್ಲದೇ ಹೋದಾಗ ಪ್ರಕೃತಿಯೇ ನಮ್ಮೊಂದಿಗೆ ಸ್ಪಂದಿಸುತ್ತದೆ. ನಮ್ಮ ಭಾವನೆಗಳಿಗೆ ಕನಿಷ್ಠ ಕಿವಿಯಾಗಿಯಾದರೂ ಸಿಗುತ್ತದೆ. ಆ ಮೂಲಕ ಮನುಷ್ಯ ಭಾವನೆಗಳಿಗೆ ಬೆಲೆ ಕೊಡುತ್ತದೆ. ಇದೇ ಕಾರಣಕ್ಕೆ ಇರಬೇಕು ಮನುಷ್ಯ ಮತ್ತೊಬ್ಬ ಮನುಷ್ಯನ ಜೊತೆಗೆ ಸಂಪರ್ಕ ಕಡಿದುಕೊಂಡಾಗ ಪ್ರಕೃತಿ ಜೊತೆಗೆ ಬೆರೆತು ಬಿಡಬೇಕು ಎಂದೆನಿಸುತ್ತದೆ. 

ವ್ಯಕ್ತಿಯ ಭಾವನೆಗಳಿಗೆ ಪ್ರತಿಸ್ಪಂದಿಸುವ ಶಕ್ತಿ ಖಂಡಿತವಾಗಿಯೂ ಈ ಪ್ರಕೃತಿಗೆ ಇದೆ. ಪ್ರಕೃತಿಯ ಪಂಚಭೂತಗಳಿಂದಲೂ ಸಾಕಷ್ಟು ಪಾಠ ಕಲಿಯಬಹುದಾಗಿದೆ. ಭೂಮಿ ಇಡೀ ಬ್ರಹ್ಮಾಂಡದ ಭಾರವನ್ನು ಹೊರುತ್ತದೆ. ಆದರೆ ಒಂದೂ ದಿನವೂ ಈ ಮನುಷ್ಯ ಅದೆಷ್ಟು ಭಾರವನ್ನು ನನ್ನ ಮೇಲೆ ಹೊರಿಸುತ್ತಾನೆ ಎಂದಿಗೂ ಕೊಸರಾಡುವುದಿಲ್ಲ. ಮನುಷ್ಯ ಬೇರೆ ಬೇರೆ ಸಂಗತಿಗಳನ್ನು ಬೇರೆಯವರಿಗಾಗಿ ಧಾರಣೆ ಮಾಡುವುದನ್ನು ಕಲಿಯಬೇಕಿದೆ. ವಾಯು ಯಾವುದೋ ಹೂವಿನ ಬಳಿ ಹೋದರೆ ಹೂವಿನ ಸುಗಂಧ, ಹಾಗೆಯೇ ಸುವಾಸನೆಯ ಬಳಿ ದುರ್ವಾಸನೆ. ಹೀಗೆ ಸುವಾಸನೆಯಾಗಲೀ, ದುರ್ನಾತಕ್ಕಾಗಿ ಅಂಟಿಕೊಳ್ಳುವುದಿಲ್ಲ. ಯಾವುದೇ ಭಾವನೆಗೆ ಅಥವಾ ಗುಣಗಳಿಗೆ ಅಂಟಿಕೊಳ್ಳದೇ ಬದುಕುವುದನ್ನು ವಾಯು ಕಲಿಸುತ್ತದೆ.

ಆಕಾಶ ಎಲ್ಲಾ ಕಡೆ ವ್ಯಾಪಿಸಿದೆ ಹಾಗೆಂದು ಎಲ್ಲಿಯೂ ಅಂಟಿಕೊಂಡಿಲ್ಲ. ಎಲ್ಲೆಡೆಯೂ ಇದ್ದೂ ಇಲ್ಲದ ನಿರ್ಲಿಪ್ತತೆ ಕಲಿಸುತ್ತದೆ. ಮಳೆ ಬರುವುದು ಆಕಾಶದಿಂದಲೇ ಆದರೂ ಆಕಾಶ ಎಂದಿಗೂ ಒದ್ದೆಯಾಗುವುದಿಲ್ಲ. ಅಗ್ನಿ ಕೆಡುಕು ಅಥವಾ ಒಳಿತು ಏನನ್ನೂ ತನ್ನಲ್ಲಿ ಇಟ್ಟುಕೊಳ್ಳುವುದಿಲ್ಲ. ಎಲ್ಲವನ್ನೂ ಭಸ್ಮ ಮಾಡಿ ಬಿಡುತ್ತದೆ. ಹಾಗಾಗಿ ಬದುಕಿನಲ್ಲಿ ಕೆಟ್ಟದ್ದೇ ಇರಲೀ ಅಥವಾ ಒಳ್ಳೆಯದೇ ಇರಲಿ ಏನನ್ನೂ ಇಟ್ಟುಕೊಳ್ಳದೇ ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವಂತೆ ಪಾಠವನ್ನು ಕಲಿಸುತ್ತದೆ.

ಜಲ ಎಂದಿಗೂ ಶುದ್ಧತೆಯ ಸಂಕೇತ. ತನ್ನನ್ನು ಅದೆಷ್ಟೋ ಜನ ಕೊಳಕು ಮಾಡಿದರೂ ಅವರೆಲ್ಲರನ್ನು ತೊಳೆಯುತ್ತದೆ. ಅದು ಎಂದಿಗೂ ಯಾರನ್ನೂ ದೂಷಿಸುವುದಿಲ್ಲ. ಪಾರದರ್ಶಕವಾಗಿ ತನ್ನನ್ನು ತಾನು ತೋರಿಸುತ್ತದೆ. ಆ ಮೂಲಕ ತನ್ನನ್ನು ತಾನು ಪರಿಶುದ್ಧವಾಗಿ ಕಾಣುವ ಮೂಲಕ ಇಡೀ ಜಗತ್ತನ್ನು ತೊಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಇಂತಹ ಅಗಣಿತ ಸಂತೋಷ ನೀಡುವ ಪ್ರಕೃತಿಗಿಂತ ಮಿಗಿಲಾದ ಸ್ನೇಹಿತ, ಬಂಧು, ಸಖ ಯಾರಾದರೂ ಇರಲು ಸಾಧ್ಯವೇ...... ಈ ಜಗತ್ತಿನಲ್ಲಿ. ಬಹುಶಃ ಇದೇ ಕಾರಣಕ್ಕೆ ಇರಬೇಕು ಹಿರಿಯರು ಹೇಳಿದ್ದು ಪ್ರಕೃತಿ ಜೊತೆಗಿನ ಸಂಬಂಧ ಶಾಶ್ವತವಾದ ಸಂತೋಷವನ್ನು ನೀಡುತ್ತದೆ ಎಂದು. ಹೀಗೆ ನೀವು ಒಮ್ಮೆ ಪ್ರಕೃತಿಯ ಜೊತೆಗೆ ಸ್ನೇಹ ಮಾಡಿಕೊಳ್ಳಿ. ನೀವೂ ಆ ಪರಿಸರದ ಸಂತೋಷವನ್ನು ಆನಂದಿಸಿ.

ನೇತ್ರಾವತಿ 

ದ್ವೀತಿಯ ಬಿ.ಎ

ಪತ್ರಿಕೋದ್ಯಮ ವಿಭಾಗ,

ವಿಶ್ವವಿದ್ಯಾನಿಲಯ ಕಾಲೇಜು,

ಮಂಗಳೂರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article