Chikkamagaluru: ಅಭಿವೃದ್ಧಿಗೆ ಶ್ರಮಿಸಿರುವ ಒಕ್ಕಲಿಗ ಮುಖಂಡರನ್ನು ಬಿಜೆಪಿ ಕಡೆಗಣಿಸುತ್ತಿದೆ

Chikkamagaluru: ಅಭಿವೃದ್ಧಿಗೆ ಶ್ರಮಿಸಿರುವ ಒಕ್ಕಲಿಗ ಮುಖಂಡರನ್ನು ಬಿಜೆಪಿ ಕಡೆಗಣಿಸುತ್ತಿದೆ


ಚಿಕ್ಕಮಗಳೂರು: ಪಕ್ಷ ನಿಷ್ಠೆ ಜೊತೆಗೆ ಅಭಿವೃದ್ಧಿಗೆ ಶ್ರಮಿಸಿರುವ ಒಕ್ಕಲಿಗ ಮುಖಂಡರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದು ಒಕ್ಕಲಿಗ ಪ್ರೀಮಿಯರ್ ಲೀಗ್‌ನ ಮುಖ್ಯಸ್ಥ ಹೊಲದಗದ್ದೆ ಗಿರೀಶ್ ಆರೋಪಿಸಿದರು.

ಚಿಕ್ಕಮಗಳೂರಿನ ಮಾಜಿ ಸಚಿವ ಸಿ.ಟಿ.ರವಿ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡದೆ ಅನ್ಯಾಯವೆಸಗಲಾಗಿದೆ ಎಂದು ಆರೋಪಿಸಿ ನಗರ ಹೊರಲಯದ ಮಲ್ಲಂದೂರು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನುದ್ದೇಶಿಸಿ ಅವರು ಮಾತನಾಡಿದರು.  ಅವರು ಮಾತನಾಡಿದರು. 

ಪಕ್ಷ ನಿಷ್ಠೆ, ದಕ್ಷ ಆಡಳಿತದ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದ ಮಾಜಿ ಸಚಿವ ಸಿ.ಟಿ.ರವಿ ಅವರನ್ನು ರಾಜ್ಯದ ಕೆಲವು ಸ್ವಾರ್ಥಿಗಳು ಹಾಗೂ ಸ್ವಜನ ಪಕ್ಷಪಾತಿಗಳು ರಾಜಕೀಯವಾಗಿ ಮೂಲೆ ಗುಂಪು ಮಾಡಲು ನಡೆಸಿರುವ ಪ್ರಯತ್ನವನ್ನು ಖಂಡಿಸುತ್ತೇವೆ ಎಂದರು.

ಪ್ರಖರ ಹಿಂದುತ್ವವನ್ನು ಪ್ರತಿಪಾದಿಸುತ್ತ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳಿಗೆ ಕಿಂಚಿತ್ತೂ ಚ್ಯುತಿ ಬಾರದ ರೀತಿ ಹೋರಾಟದ ಮೂಲಕವೇ ಜನ ಮನ್ನಣೆ ಗಳಿಸಿರುವ ರವಿ ಹಾಗೂ ಪ್ರತಾಪ್ ಸಿಂಹ ಅವರ ವರ್ಚಸ್ಸು ಕುಂದಿಸಲು ಪಕ್ಷದಲ್ಲೇ ಕೆಲವರು ಪ್ರಯತ್ನಿಸುತ್ತಿರುವುದು ಸರಿಯಲ್ಲ. ತಮ್ಮ ಸ್ವಾರ್ಥ ಸಾಧನೆಗೆ ಪಕ್ಷ ನಿಷ್ಠ ಹೋರಾಟಗಾರರಿಗೆ ಅನ್ಯಾಯ ಮಾಡಲು ಹೊರಟಿರುವುದು ಜನಸಾಮಾನ್ಯರಿಗೆ ಮಾಡಿದ ದ್ರೋಹವೇ ಆಗಿದೆ.

ಸಿ.ಟಿ.ರವಿ ದತ್ತಪೀಠದ ಹೋರಾಟದಿಂದ ಸಂಘಟನೆಯಲ್ಲಿ ಗುರುತಿಸಿಕೊಂಡು ವಿವಾದವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವ ವರೆಗೆ ಅಹರ್ನಿಷಿ ಹೋರಾಟ ನಡೆಸಿ ಒಂದು ಹಂತದ ಜಯ ತಂದು ಕೊಡುವುದರ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಹಿಂದುತ್ವದ ವಿಚಾರಗಳಿಗೆ ಧಕ್ಕೆ ಬಂದಾಗಲೆಲ್ಲಾ ಇಡೀ ರಾಜ್ಯದಲ್ಲಿ ಮೊದಲಿಂದಲೂ, ಈಗಲೂ ಧ್ವನಿ ಎತ್ತುವವರಲ್ಲಿ ರವಿ ಅವರೇ ಮುಂಚೂಣಿ ನಾಯಕರಾಗಿದ್ದಾರೆ ಎಂದರು. 

ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಸಿ.ಟಿ.ರವಿ ಅವರ ಕೊಡುಗೆಯೂ ಇತರರಷ್ಟೇ ಇದೆ. ಇದೇ ಕಾರಣಕ್ಕೆ ನಾಲ್ಕುಬಾರಿ ಶಾಸಕರಾಗಿ ಗೆದ್ದು ಜನ ಮನ್ನಣೆಗಳಿಸಿರುವ ನಾಯಕ ಅವರಾಗಿದ್ದಾರೆ. ಇದೆಲ್ಲ ಕಾರಣಕ್ಕೆ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಉನ್ನತ ಹುದ್ದೆಗೇರಲು ಸಾಧ್ಯವಾಗಿದೆ ಎಂದರು.

ರಾಷ್ಟ್ರಮಟ್ಟದ ಹುದ್ದೆಯನ್ನೂ ಸಮರ್ಥವಾಗಿ ನಿಭಾಯಿಸಿರುವ ಅವರು ಇಡೀ ದೇಶವನ್ನು ಸುತ್ತಿ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿದ್ದಾರೆ. ತಮ್ಮ ಕ್ಷೇತ್ರವಲ್ಲದೆ ಸುತ್ತಲಿನ ಹತ್ತಾರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಸಂಘಟನಾ ಸಾಮರ್ಥ್ಯ ಇರುವ ರವಿ ಅವರ ಬೆಳವಣಿಗೆಗೆಯು ನಮ್ಮ ರಾಜ್ಯದ ಮುಖಂಡರುಗಳಾದ ಅಪ್ಪ ಮಕ್ಕಳ ಕಣ್ಣು ಕುಕ್ಕುವಂತೆ ಮಾಡಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.

ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಅನುಭವಿಸಿ ಪಕ್ಷವನ್ನೇ ತ್ಯಜಿಸಿ ಬೇರೆ ಪಕ್ಷ ಕಟ್ಟಿದರಿಂದಲೇ ಪಕ್ಷ ನಿಷ್ಠ ರವಿ ಅಂತಹವರು ತೊಂದರೆಗೆ ಸಿಕ್ಕುತ್ತಿರುವುದು ವಿಪರ್ಯಾಸವಾಗಿದೆ. ಜನಾಂಗದ ಮತಗಳು ಅಲ್ಪ ಪ್ರಮಾಣದಲ್ಲಿದ್ದರೂ ಎಲ್ಲಾ ಜಾತಿ, ಜನಾಂಗದವರ ಪ್ರೀತಿ, ವಿಶ್ವಾಸಗಳಿಸಿ ನಾಲ್ಕು ಬಾರಿ ಶಾಸಕರಾದ ರವಿ ಅವರ ವಿರುದ್ಧ ಪಕ್ಷದ ವರಿಷ್ಠರೆನಿಸಿಕೊಂಡ ಅದರಲ್ಲೂ ಮಾಜಿ ಮುಖ್ಯಮಂತ್ರಿಯೊಬ್ಬರು ಮಕ್ಕಳ ಜೊತೆ ಸೇರಿ ಜಾತಿಯನ್ನು ಎತ್ತಿಕಟ್ಟಿ ಸೋಲಿಸುವ ಕುತಂತ್ರ ಮಾಡಿದ್ದು ದುರಂತವೇ ಸರಿ. ಮೊದಲು ಅಂತಹ ಪಕ್ಷ ದ್ರೋಹಿಗಳ ವಿರುದ್ಧ ಹೈಕಮಾಂಡ್ ಶಿಸ್ತು ಕ್ರಮ ತೆಗೆದುಕೊಂಡು ಪಕ್ಷ ನಿಷ್ಠರಿಗೆ ನೈತಿಕ ಬೆಂಬಲ ನೀಡುವ ಕೆಲಸವನ್ನು ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಸಿ.ಟಿ.ರವಿ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ವರಿಷ್ಠರಿಂದ ಕರೆ ಬಂದ ಮರು ಕ್ಷಣದಲ್ಲೇ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿದವರಾಗಿದ್ದಾರೆ. ಪಕ್ಷ ನಿಷ್ಠೆಗೆ ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ.

ಸಾಮಾನ್ಯ ಕಾರ್ಯಕರ್ತರನಿಂದ ಹಿಡಿದು ಉನ್ನತ ಸ್ಥಾನದಲ್ಲಿರುವ ಮುಖಂಡರೆಲ್ಲರೂ ಪಕ್ಷಕ್ಕೆ ನಿಷ್ಠರಾಗಿರಬೇಕು ಎಂದು ಬಯಸುವವರು ಸಿ.ಟಿ.ರವಿ, ಇದನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ದನ್ನೇ ಸಹಿಸದೆ ಪಕ್ಷದಲ್ಲಿ ಮೂಲೆ ಗುಂಪು ಮಾಡುವ ಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿ ಮಾಡಿದ್ದಾರೆ. ಅಂತಹವರಿಗೆ ಇನ್ನಷ್ಟು ಮಣೆ ಹಾಕಿದರೆ ಪಕ್ಷದ ಸಂಘಟನೆ ಜೊತೆಗೆ ಸಾಮಾನ್ಯ ಜನತೆಗೆ ಅದರಿಂದ ನಷ್ಟೇ ಹೆಚ್ಚು ಎಂದಿದ್ದಾರೆ. 

ಸಿ.ಟಿ.ರವಿ ಅವರಿಗೆ ಇನ್ನಾದರೂ ಸೂಕ್ತ ಸ್ಥಾನ ಮಾನ ದೊರಕಿಸದೆ ಇದ್ದಲ್ಲಿ ಈ ಬಾರಿ ಚುನಾವಣೆಯಲ್ಲಿ ತಮ್ಮದೇ ನಿರ್ಣಯವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಒಕ್ಕಲಿಗ ಪ್ರೀಮಿಯರ್ ಲೀಗ್ ಮುಖಂಡರುಗಳಾದ ಉತ್ತಮ್‌ಗೌಡ ಹುಲಿಕೆರೆ, ದಯಾನಂದ್ ಮಾಕೋಡು, ಗೌತಮ್ ಮಾಕೋಡು, ಪೂರ್ಣೇಶ್, ದೀಕ್ಷಿತ್ ಗೌಡ, ಕೃಷಿ, ನವೀನ್, ಪ್ರಥಮ್, ಮೇಘನಾ, ತಿಲಕ್, ಆದರ್ಶ, ರಾಕೇಶ್‌ಗೌಡ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article