Mangalore: ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಬೇಡ

Mangalore: ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಬೇಡ

ಮಂಗಳೂರು: ಅಸ್ಪಶ್ಯರಲ್ಲದ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವ ಪ್ರಯತ್ನ ನಡೆದಿದ್ದು, ಈ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾದರೆ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ದಲಿತ ಸಂಘಟನೆಗಳು ಎಚ್ಚರಿಸಿವೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದಸಂಸ ಮುಖಂಡರಾದ ಎಂ. ದೇವದಾಸ್, ಮೊಗೇರ ಜಾತಿಯ ಕುಲಶಾಸ್ತ್ರೀಯ ಅಧ್ಯಯನ ಸಮಿತಿಯ ಅಂತಿಮ ವರದಿಯನ್ನು ಇತ್ತೀಚೆಗೆ ಸಮಿತಿಯ ಅಧ್ಯಕ್ಷ ಜೆ.ಸಿ. ಪ್ರಕಾಶ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದ್ದು, ಅದನ್ನು ಸ್ವೀಕರಿಸಬಾರದು ಎಂದರು. 

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಮೊಲ ಬೇಟೆಯಾಡುವ ಪ್ರವೃತ್ತಿಯ ನೈಜ ಮುಗೇರರಿಗೆ ಯಾವುದೇ ಅಡೆತಡೆ ಇಲ್ಲದೆ ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಆದರೆ 1956ರಿಂದಲೂ ಮೀನುಗಾರ ಸಮುದಾಯದ ಮೊಗವೀರರು ಅಥವಾ ಮೊಗೇರರು ಈ ಸೌಲಭ್ಯವನ್ನು ಪಡೆಯುತ್ತಿದ್ದು, ದಲಿತ ಸಂಘಟನೆಗಳ ಹೋರಾಟದ ಬಳಿಕ 20010ರಿಂದ ಈ ರೀತಿ ಪ್ರಮಾಣ ಪತ್ರ ಪಡೆಯುವುದನ್ನು ತಡೆಹಿಡಿಯಲಾಗಿದೆ. ಆದರೆ, ಕಳೆದ ಸರಕಾರದ ಅವಧಿಯಲ್ಲಿ ರಚನೆಯಾದ ಜೆ.ಸಿ. ಪ್ರಕಾಶ್ ಅಧ್ಯಕ್ಷತೆಯ ಸಮಿತಿಯು ಸಲ್ಲಿಸಿರುವ ವರದಿಯ ಪ್ರಕಾರ ಮೊಗೇರ ಸಮುದಾಯದ ಪರಿಶಿಷ್ಟ ಜಾತಿ ಸೌಲಭ್ಯವನ್ನು ಮರುಸ್ಥಾಪಿಸಲು ಮತ್ತು ಪ್ರಮಾಣ ಪತ್ರ ವಿತರಿಸಲು ಇದ್ದ ತೊಡಕು ಅಧ್ಯಯನ ಮಾಡಲಾಗಿದೆ ಎನ್ನಲಾಗಿದೆ. ಇದು ಮತ್ತೆ ಮೀನುಗಾರ ಮೊಗೇರರ ಬಾಹ್ಯ ಪ್ರಭಾವ ಮತ್ತು ರಾಜಕೀಯ ಒತ್ತಡ ಹೇರಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯಲು ನಡೆಸಿರುವ ಹುನ್ನಾರ ಎಂದವರು ಹೇಳಿದರು. 

1956ರಿಂದ ಭಾರತ ಸರಕಾರವು ಸಂವಿಧಾನದ ಪ್ರಕರಾ ಪ.ಜಾತಿಯ ಪಟ್ಟಿಯಲ್ಲಿ ಕರ್ನಾಟಕದ ಮೊಗೇರ್ ಪರಿಶಿಷ್ಟ ಜಾತಿ ಎಂದೂ ಉತ್ತಕರ ಕನ್ನಡ ಜಿಲ್ಲೆಯ ಮೀನುಗಾರ ಪ್ರವೃತ್ತಿಯ ಮೊಗೇರರು ಹಿಂದುಳಿದ ಡಾತಿಯ ಪ್ರವರ್ಗ 1 ಎಂದೂ ತಿಳಿಸಲಾಗಿತ್ತು. ಪರಿಶಿಷ್ಟ ಜಾತಿಯವರಲ್ಲದ ಮೀನುಗಾರ ಮೊಗೇರರು (ದ.ಕ., ಉಡುಪಿ ಮತ್ತು ಕೊಳ್ಳೆಗಾಲ ಹೊರತುಪಡಿಸಿ) ಇದರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದನ್ನು ಮನಗಂಡು ಕ್ಷೇತ್ರೀಯ ನಿರ್ಬಂಧ ಹಾಕಲಾಗಿತ್ತು. ಈವರೆಗಿನ ಯಾವುದೇ ನ್ಯಾಯಾಂಗ ಪ್ರಾಧಿಕಾರವೂ ಮೀನುಗಾರ ಮೊಗೇರರು ಪರಿಶಿಷ್ಟ ಜಾತಿಯ ವರೆಂದೂ ಹೇಳಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಇತ್ತೀಚೆಗೆ ಅಧ್ಯಯನ ವರದಿ ಸಲ್ಲಿಸಿರುವ ಜೆ.ಸಿ. ಪ್ರಕಾಶ್ರವರು ತಿಳಿಸಿರುವಂತೆ ಯಾವ ಮೊಗೇರರ ಮೀಸಲಾತಿ ಸೌಲಭ್ಯ ಮರು ಸ್ಥಾಪಿಸಬೇಕು ಹಾಗೂ ಯಾರಿಗೆ ಪ.ಜಾತಿ ಪ್ರಮಾಣ ಪತ್ರ ವಿತರಿಸಲು ತೊಡಕಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ರೀತಿಯ ಗೊಂದಲಕಾರಿ ಹೇಳಿಕೆ ನೀಡುವ ಹಿಂದೆ ಮೀನುಗಾರ ಮೊಗೇರರ ಪ್ರಭಾವ ಅಡಗಿರುವುದು ಗೋಚರವಾಗುತ್ತಿದ್ದು ಯಾವುದೇ ಕಾರಣಕ್ಕೂ ಆ ವರದಿಯನ್ನು ಸ್ವೀಕರಿಸಬಾರದು ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ಹಾಗೂ ಸುಂದರ ಮೇರ ಆಗ್ರಹಿಸಿದರು. 

ಮುಖಂಡರಾದ ರಮೇಶ್ ಕೋಟ್ಯಾನ್, ಸೀತಾರಾಮ ಕೊಂಚಾಡಿ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article