Mangalore: ಮೌಲ್ಯಯುತ ಶಿಕ್ಷಣ ದೂರವಾಗುವ ಆತಂಕ: ಡಾ. ಮೋಹನ ಆಳ್ವ

Mangalore: ಮೌಲ್ಯಯುತ ಶಿಕ್ಷಣ ದೂರವಾಗುವ ಆತಂಕ: ಡಾ. ಮೋಹನ ಆಳ್ವ


ಮಂಗಳೂರು: ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿದ್ದು, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಇಂದಿನ ದಿನಗಳಲ್ಲಿ ಮೌಲ್ಯಯುತ ಶಿಕ್ಷಣ ಎಲ್ಲಿ ದೂರವಾಗುತ್ತದೋ ಎಂಬ ಆತಂಕ ಎದುರಾಗಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಸಂವಾದ ನಡೆಸಿದರು.

ವಿದ್ಯಾರ್ಥಿಗಳಿಗೆ ಬೇಕಾದ ಶಿಕ್ಷಣವನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು. ಇದನ್ನು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನಡೆಸುತ್ತಿದ್ದೇವೆ. ಇದು ಮುಂದೆ ಎಲ್ಲಿವರೆಗೆ ಸಾಗುತ್ತದೆ ಎಂದು ಈಗಲೇ ಹೇಳಲಾಗದು. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಿ ಕಲಿಕಾ ಕ್ರಮ ಅಪ್ರಸ್ತುತತೆ ಕಾಡುತ್ತದೆಯೇ ಎಂಬ ಭಯ ಯಾವಾಗಲೂ ಇದ್ದೇ ಇರುತ್ತದೆ ಎಂದರು.

ಸುಮಾರು 20 ವರ್ಷ ಕಾಲ ಹಾಸ್ಟೆಲ್‌ನಲ್ಲಿದ್ದುಕೊಂಡು ಕಲಿತ ಬಗ್ಗೆ ಸ್ವಾನುಭವ ಹೇಳಿದ ಅವರು, ಹಾಸ್ಟೆಲ್‌ನಲ್ಲಿ ವಿದ್ಯೆ ಜತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೂ ಒತ್ತು ನೀಡಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನುಭವ. ಅದಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹಾಸ್ಟೆಲ್ ಸಹಿತ ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ. ಆರ್ಥಿಕ ಸಂಕಷ್ಟದಲ್ಲಿರುವವರು, ಪ್ರತಿಭಾನ್ವಿತರು, ಬಡ ಮಧ್ಯಮ ವರ್ಗ, ಕ್ರೀಡೆ, ಸಾಂಸ್ಕೃತಿಕ ಸಾಧಕ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಉತ್ತಮ ವಿದ್ಯೆಗೆ ಅವಕಾಶ ನೀಡಲಾಗುತ್ತಿದೆ. ಕ್ರೀಡೆಯಲ್ಲಿ ಹಾಗೂ ಸಾಂಸ್ಕೃತಿಕವಾಗಿ ಅತ್ಯುತ್ತಮ ಸಾಧನಾ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.

ರಾಜಕೀಯ ಪಕ್ಷಗಳ ಮೇಲೆ ನನಗೆ ಗೌರವ ಇದೆ, ಆದರೆ ರಾಜಕೀಯ ಪಕ್ಷಗಳಿಂದ ನಾನು ದೂರ ಇದ್ದೇನೆ. ಬಾಲ್ಯದಿಂದ ಇಲ್ಲಿವರೆಗೂ ನಾನು ಇನ್ನೊಬ್ಬರ ಜತೆ ಸ್ಪರ್ಧೆ ಮಾಡಿದವನಲ್ಲ. ಯಾರಲ್ಲೂ ವೈರತ್ವ ಹೊಂದಿಲ್ಲ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಆಯಾಮಗಳಲ್ಲೂ ನಾಯಕತ್ವ ವಹಿಸಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದರು.

ದುಶ್ಚಟ ಇಲ್ಲ..

ಡಾ.ಮೋಹನ ಆಳ್ವರಿಗೆ ಯಾವುದೇ ದುಶ್ಚಟ ಇಲ್ಲವಂತೆ. ಬೀಡಿ, ಸಿಗರೇಟು, ಪಾನಮತ್ತನಾಗುವುದು ಕೂಡ ಇಲ್ಲ. ದಿನದಲ್ಲಿ ಆರು ಗಂಟೆ ಮಾತ್ರ ನಿದ್ರೆ, ಉಳಿದ 18 ಗಂಟೆ ಕೆಲಸ. ಮೊಬೈಲ್ ಇದ್ದರೂ ಇಲ್ಲಿವರೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಎಕ್ಸ್ ತಾಣ, ಇನ್ಸ್ಟಾಗ್ರಾಮ್ ಯಾವುದರಲ್ಲೂ ಇಲ್ಲ. ಇದಕ್ಕೆ ಶೃಂಗೇರಿಯ ಸ್ವಾಮೀಜಿ ಪ್ರೇರಣೆ. ಜಾಲತಾಣಗಳಿಲ್ಲದೆ ಹೊರಗಿನ ಆಗುಹೋಗುಗಳನ್ನು ಅವರಿಗೆ ತಿಳುದುಕೊಳ್ಳಲು ಸಾಧ್ಯ ಎಂದಾದರೆ ನನಗೂ ಯಾಕೆ ಸಾಧ್ಯವಿಲ್ಲ ಎಂದು ನಾನು ಜಾಲತಾಣಗಳ ಗೋಜಿಗೆ ಹೋಗುವುದೇ ಇಲ್ಲ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡರು.

250 ಕೋಟಿ ರೂ.ಗಳ ಸಾಲ...

ಡಾ.ಮೋಹನ ಆಳ್ವರು 250 ಕೋಟಿ ರೂ. ಸಾಲದ ಧನಿಕ. ನಾನು ಕ್ಲಿನಿಕ್ ತೆರೆಯುವಾಗ 1 ಲಕ್ಷ ರೂ. ಸಾಲ ಮಾಡಿದ್ದೆ. ನನ್ನ 125 ಎಕರೆ ವಿಶಾಲ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಕ್ಯಾಂಪಸ್ ಅಭಿವೃದ್ಧಿಯಾಗಿದ್ದು, ಈಗ 250 ಕೋಟಿ ರೂ.ಗಳಷ್ಟು ಸಾಲ ಇದೆ. ಸಾಲ ಮಾಡುವುದು, ಸಾಲ ಮರು ಪಾವತಿಸುವುದರಲ್ಲಿ ಖುಷಿ ಇದೆ, ಸಾಲ ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ, ಸಾಲ ಇಲ್ಲದಿದ್ದರೆ, ಅದು ಹೆಬ್ಬಾವಿನಂತೆ ಆಲಸ್ಯತನಕ್ಕೆ ಕಾರಣವಾಗುತ್ತದೆ ಎಂದರು.

ಸಾಹಿತ್ಯ ಆಸಕ್ತರಿಗೆ ಮಾತ್ರ ನುಡಿಸಿರಿ..

ಇನ್ನು ಮುಂದೆ ನುಡಿಸಿರಿ ಕಾರ್ಯಕ್ರಮ ಕೇವಲ ಸಾಹಿತ್ಯ ಆಸಕ್ತರಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಹಿಂದಿನಂತೆ ಬೇಕಾಬಿಟ್ಟಿ ಜಾತ್ರೆಯಂತೆ ಇರುವುದಿಲ್ಲ. ಈ ಬಾರಿಯ ನುಡಿಸಿರಿಗೆ ಆಸಕ್ತ ಸಾಹಿತ್ಯಾಸಕ್ತರನ್ನು ಆಹ್ವಾನಿಸಿ ವಿಭಿನ್ನ ರೀತಿಯಲ್ಲಿ ಮೂರು ದಿನಗಳ ಕಾಲ ಸಂಘಟಿಸಲಾಗುವುದು. ಆದರೆ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮ ವಿರಾಸತ್ ಎಂದಿನಂತೆಯೇ ನಡೆಯಲಿದೆ ಎಂದರು.

ಮಂಗಳೂರು ಟುಡೇ ಮಾಸಿಕದ ಸಂಪಾದಕ ವಿ.ಯು.ಜಾರ್ಜ್ ಗೌರವ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.

ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್.ಸಿ.ಭಟ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article