Mangalore: ಕ್ಯಾ.ಬೃಜೇಶ್ ಚೌಟ ಅವರು ಐತಿಹಾಸಿಕ ಗೆಲುವಿನೊಂದಿಗೆ ಲೋಕಸಭೆ ಪ್ರವೇಶಿಸಬೇಕು: ನಳಿನ್ ಕುಮಾರ್ ಕಟೀಲ್
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕ್ಯಾ.ಬೃಜೇಶ್ ಚೌಟ ಅವರು ಐತಿಹಾಸಿಕ ಗೆಲುವಿನೊಂದಿಗೆ ಲೋಕಸಭೆ ಪ್ರವೇಶಿಸಬೇಕು. ಅವರ ಗೆಲುವಿನ ಅಂತರ ಮೂರು ಲಕ್ಷಕ್ಕೂ ಅಧಿಕವಿರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ಕಾರ್ಯೋನ್ಮುಖರಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ಬೂತ್ ಗೆದ್ದಾಗ ದೇಶ ಗೆಲ್ಲಲು ಸಾಧ್ಯ. ನಮ್ಮ ಗುರಿ ಮತಗಟ್ಟೆಯತ್ತ ಇರಬೇಕು. ಬಿಜೆಪಿ ಭಾರೀ ಅಂತರದ ಗೆಲುವು ಸಾಧಿಸುವಲ್ಲಿ ಕಾರ್ಯಕರ್ತರು ಪಣ ತೊಡಬೇಕು ಎಂದರು.
ದ.ಕ.ದಲ್ಲಿ ಕಳೆದ 15 ವರ್ಷಗಳ ಕಾಲ ಸಂಸದನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ವಿಚಾರಧಾರೆಗೆ ಬದ್ಧನಾಗಿರುವವ ನಾನು ಎಂದೂ ಅಧಿಕಾರಕ್ಕಾಗಿ ಹಾತೊರೆದವನಲ್ಲ. ಈ ಬಾರಿ ಬೃಜೇಶ್ ಚೌಟರ ಗೆಲುವಿಗೆ ಶ್ರಮಿಸುವೆ ಎಂದು ಹೇಳಿದ ನಳಿನ್ ಕುಮಾರ್ ಕಟೀಲ್ , ಬರಲಿರುವ ಚುನಾವಣೆಯಲ್ಲಿ ಬಿಜೆಪಿ ೪೦೦ ಸ್ಥಾನಗಳನ್ನು ಗೆಲ್ಲುವುದು ಖಚಿತ. ಈ ಮೂಲಕ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದರು.
ಅಭಿವೃದ್ಧಿಗೆ ಒತ್ತು ನೀಡುವೆ:
ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಮಾತನಾಡಿ, ಈ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು, ನನ್ನ ಸೌಭಾಗ್ಯ. ನನ್ನ ಗೆಲುವಿಗೆ ಪ್ರತಿಯೊಬ್ಬ ಸಹಕಾರ, ಪ್ರೀತಿ ಅಗತ್ಯ. ಸಂಘಟನಾತ್ಮಕ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದಲ್ಲಿ ಹಿಂದುತ್ವದ ಆಧಾರದಲ್ಲಿಯೇ ಅಭಿವೃದ್ಧಿಗೆ ಒತ್ತು ನೀಡುವೆ ಎಂದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಕಾರ್ಯಕರ್ತರೇ ಪಕ್ಷದ ಆಸ್ತಿ. ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಎಲ್ಲರೂ ಸಂಘಟಿತರಾಗುವ ಮೂಲಕ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟರನ್ನು ಭಾರೀ ಅಂತರದ ಗೆಲುವಿನೊಂದಿಗೆ ಲೋಕಸಭೆಗೆ ಕಳಿಸಬೇಕು ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೃಜೇಶ್ ಚೌಟ ಅವರ ಗೆಲುವಿಗೆ ಪ್ರತಿಯೊಬ್ಬರ ಶ್ರಮ ಅಮೂಲ್ಯ. ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಿಂದ ೪೫ ಸಾವಿರಕ್ಕೂ ಅಧಿಕ ಮತಗಳ ಲೀಡ್ ತರುವಲ್ಲಿ ಪಣತೊಟ್ಟಿದ್ದೇವೆ. ಅದೇ ರೀತಿ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಹೆಚ್ಚಿನ ಮತಗಳು ಚೌಟರ ಪಾಲಾಗಬೇಕು. ಭಾರೀ ಅಂತರದ ಗೆಲುವಿನೊಂದಿಗೆ ಹೊಸ ದಾಖಲೆ ಈ ಬಾರಿ ಸೃಷ್ಟಿಯಾಗೇಬೇಕು ಎಂದು ವೇದವ್ಯಾಸ ಕಾಮತ್ ಹೇಳಿದರು.
ಇದೇ ಸಂದರ್ಭ ಬಿಜೆಪಿಯ ಹಿರಿಯ ಕಾರ್ಯಕರ್ತ ಸತೀಶ್ ಪ್ರಭು ಅವರು ಮರಳಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ, ಸಂಸದರು ಸೇರಿದಂತೆ ಪಕ್ಷದ ಮುಖಂಡರು ಅವರನ್ನು ಬರಮಾಡಿಕೊಂಡರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ, ರವಿಶಂಕರ ಮಿಜಾರು, ಮಂಜುಳಾ ರಾವ್, ರಾಕೇಶ್ ರೈ, ವಿಜಯ ಕುಮಾರ್ ಶೆಟ್ಟಿ, ಪೂರ್ಣಿಮಾ ಎಂ., ಯತೀಶ್ ಆರ್ವರ್, ಸಂಜಯ್ ಪ್ರಭು, ಮಹೇಶ್ ಜೋಗಿ, ಪೂಜಾ ಪೈ, ರಮೇಶ್ ಹೆಗ್ಡೆ, ಜೆಸಿಲಾ ಡಿಸಿಲ್ವಾ, ಲಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು ಸ್ವಾಗತಿಸಿ, ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು.
"ದೇಶಕದ ಅಖಂಡತೆಗೆ ಮೋದಿ ಗ್ಯಾರಂಟಿ"
ದುರ್ಬಲ ಆರ್ಥಿಕತೆಯಲ್ಲಿದ್ದ ರಾಷ್ಟ್ರವನ್ನು ಸದೃಢ ಆರ್ಥಿಕ ರಾಷ್ಟ್ರವಾಗಿ ಮಾಡುವ ಮೂಲಕ ವಿಶ್ವದಲ್ಲಿಯೇ ಐದನೇ ಸ್ಥಾನಕ್ಕೆ ತಂದಿರವ ಮೋದಿ ದೇಶಕ್ಕೆ ಹೊಸ ದಿಕ್ಕು ಕೊಟ್ಟವರು. ಆರ್ಥಿಕ ಶಿಸ್ತಿನಿಂದ ದೇಶವನ್ನು ಸಮರ್ಥವಾಗಿ ಮುನ್ನಡೆಸಿದವರು. ನಮಗೆ ಬೇರೆ ಯಾವ ಗ್ಯಾರಂಟಿಯೂ ಬೇಕಿಲ್ಲ, ಹಿಂದುತ್ವಕ್ಕೆ ಮತ್ತು ದೇಶದ ಅಖಂಡತೆಗೆ ಮೋದಿ ಗ್ಯಾರಂಟಿಯಾಗಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ದೇಶ ಎದುರು ನೋಡುತ್ತಿದೆ. -ಕ್ಯಾ.ಬೃಜೇಶ್ ಚೌಟ

