Mangalore: ಸಂಘ ಪರಿವಾರದ ಕಾರ್ಯಕರ್ತರ ಗುರಿಯಾಗಿಸಿ ಗೂಂಡಾ ಕಾಯ್ದೆ, ಗಡಿಪಾರು ಬೀದಿಗಿಳಿದು ಹೋರಾಟದ ಎಚ್ಚರಿಕೆ

Mangalore: ಸಂಘ ಪರಿವಾರದ ಕಾರ್ಯಕರ್ತರ ಗುರಿಯಾಗಿಸಿ ಗೂಂಡಾ ಕಾಯ್ದೆ, ಗಡಿಪಾರು ಬೀದಿಗಿಳಿದು ಹೋರಾಟದ ಎಚ್ಚರಿಕೆ


ಮಂಗಳೂರು; ಅಕ್ರಮ ಗೋಹತ್ಯೆಗೆ ಹಾಗೂ ಮತಾಂತರ ತಡೆದ ಸಂಘಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಸಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಡಿಪಾರು, ಗೂಂಡಾ ಕಾಯ್ದೆ ಜಾರಿಗೊಳಿಸುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸದಿದ್ದರೆ, ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಎಚ್ಚರಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಪರಿವಾರದ ಕಾರ್ಯಕರ್ತರು ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ. ಹಿಂದು ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಿದ್ದಾರೆ. ಗೋರಕ್ಷಣೆಗೆ ಕಾಯ್ದೆ ಇದ್ದರೂ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿಲ್ಲ. ಹಾಗೆಂದು ಹೋರಾಟ ಮಾಡಿದವರ ವಿರುದ್ಧವೇ ಕೇಸು ದಾಖಲಿಸಲಾಗುತ್ತಿದೆ. ಇಂತಹ ನಿರ್ಧಾರವನ್ನು ಪೊಲೀಸ್ ಇಲಾಖೆ ವಾಪಸ್ ಪಡೆಯಬೇಕು. ಗಾಂಜಾ ಮತ್ತಿತರ ಕೃತ್ಯಗಳಲ್ಲಿ ತೊಡಗಿಕೊಂಡವರ ಜತೆ ಪರಿವಾರದ ಕಾರ್ಯಕರ್ತರನ್ನು ಹೋಲಿಸಬಾರದು, ಅದರ ಬದಲು ದುಷ್ಕೃತ್ಯ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲಿ, ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಅಲ್ಲ ಎಂದರು.

ಮಂಗಳೂರಿನ ಕುದ್ರೋಳಿಯಲ್ಲಿ ಅಧಿಕೃತ ಒಂದೇ ಕಸಾಯಿಖಾನೆ ಇದೆ, ಆದರೆ ಈಗ 50ಕ್ಕೂ ಅಧಿಕ ಕಡೆಗಳಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದೆ. ಅಂತಹವುಗಳ ವಿರುದ್ಧ ಪೊಲೀಸರು ಯಾಕೆ

ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಅಕ್ರಮ ಮರಳುಗಾರಿಕೆ ತಡೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಸಿಆರ್ಝಡ್, ನಾನ್ ಸಿಆಝೆಡ್‌ಗಳಲ್ಲೂ ಮರಳು ಸಿಗುತ್ತಿತ್ತು. ಈಗ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಸರಕಾರ ವಿಫಲ..

ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, 800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕುಡಿವ ನೀರಿಗೂ ಹಾಹಾಕಾರ ಇದೆ. ಬೆಂಗಳೂರಿನಲ್ಲಿ ಉದ್ಯೋಗಿಗಳು ನೀರಿಲ್ಲದೆ ಊರಿಗೆ ಗುಳೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉಪಮುಖ್ಯಮಂತ್ರಿಗಳು ತಮ್ಮದೇ ಜಿಲ್ಲೆಗೆ ಸೀಮಿತವಾದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಬರ ನಿರ್ವಹಣೆಗೆ ವಿಶೇಷ ಅನುದಾನ ನೀಡುವುದಾಗಲೀ,

ಪ್ರತ್ಯೇಕ ಸಭೆ ನಡೆಸುವುದಾಗಲೂ ಯಾವುದನ್ನೂ ಸರ್ಕಾರ ಮಾಡುತ್ತಿಲ್ಲ. ಮೇಕೆದಾಟು ವಿಚಾರದಲ್ಲಿ ತಮಿಳ್ನಾಡಿಗೆ ಪೂರಕವಾಗಿ ಸರ್ಕಾರ ವರ್ತಿಸುತ್ತಿದೆ. ಇದು ರಾಜ್ಯದ ರೈತರಿಗೆ ಮಾಡುವ ದ್ರೋಹವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ ರೈತ ಪರ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದ್ದು ರೈತ ವಿರೋಧಿಯಾಗಿ ವರ್ತಿಸುತ್ತಿದೆ. ಬರಗಾಲದ ಬೆಳೆ ನಷ್ಟವನ್ನು ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿಲ್ಲ. ಕಿಸಾನ್ ಸನ್ಮಾನ್‌ನಡಿ  ರಾಜ್ಯ ಸರ್ಕಾರದ 4 ಸಾವಿರ ರೂ. ಪ್ರೋತ್ಸಾಹಧನವನ್ನು ಸ್ಥಗಿತಗೊಳಿಸಿದೆ. ವಿದ್ಯಾನಿಧಿ ಯೋಜನೆಯನ್ನು ಸ್ಥಗಿತಗೊಳಿಸಿದೆ. ಪ್ರತಿ ಲೀಟರ್ ಹಾಲಿಗೆ 7 ರೂ. ಪ್ರೋತ್ಸಾಹಧನ ಭರವಸೆ ಈಡೇರಿಸಿಲ್ಲ. ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಬೆಳೆ ನಿರ್ವಹಣೆಗೆ ರೈತ ಸಂಪದ ಯೋಜನೆಯಡಿ 100 ಕೋಟಿ ರೂ.ಗಳ ಯೋಜನೆ ಕೈಬಿಟ್ಟಿದೆ. ರೈತ ಕುಟುಂಬಗಳಿಗೆ ನೆರವಾಗುವ 180 ಕೋಟಿ ರೂ.ಗಳ ಜೀವನ್ಜ್ಯೋತಿ ವಿಮಾ ಯೋಜನೆಯನ್ನು ರದ್ದುಗೊಳಿಸಿದೆ ಎಂದು ಅವರು ಆರೋಪಿಸಿದರು.

ಮುಖಂಡರಾದ ನಿತಿನ್ ಕುಮಾರ್, ಸಂಜಯ ಪ್ರಭು, ಭಾಸ್ಕರಚಂದ್ರ ಶೆಟ್ಟಿ, ವಂಸತ ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article