Mangalore: ಪ್ರಥಮ ಚಿಕಿತ್ಸೆಯಿಂದ ಮತ್ತೊಬ್ಬರ ಜೀವವನ್ನು ಉಳಿಸಲು ಸಾಧ್ಯ: ಪ್ರೊ. ಜಯಕರ ಭಂಡಾರಿ ಎಂ.
ಮಂಗಳೂರು: ಆರೋಗ್ಯದ ತುರ್ತು ಸ್ಥಿತಿ ಯಾವ ಸಂದರ್ಭದಲ್ಲಿಯಾದರೂ ಪ್ರತಿಯೊಬ್ಬರಿಗೂ ಬರಬಹುದು, ಆ ಸಮಯದಲ್ಲಿ ಪ್ರಥಮ ಚಿಕಿತ್ಸೆಯ ಅವಶ್ಯಕತೆ ಪ್ರತಿಯೊಬ್ಬರಿಗೂ ಅಗತ್ಯವಿರುತ್ತದೆ. ಸೂಕ್ತ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡಿದಲ್ಲಿ ಒಂದು ಜೀವ ಉಳಿಸಲು ಸಾಧ್ಯ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ತಿಳಿಸಿದರು.
ಅವರು ಎ.13 ರಂದು ನಗರದ ರಥಬೀದಿಯಲ್ಲಿರುವ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್, ವಿದ್ಯಾರ್ಥಿ ಪಾಲನಾ ಘಟಕ, ಐಕ್ಯೂಎಸಿ ಹಾಗೂ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ಪ್ರಥಮ ಚಿಕಿತ್ಸೆ ಕ್ರಮಗಳ ಕುರಿತು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಒಬ್ಬ ವ್ಯಕ್ತಿ ಅಸ್ವಸ್ಥಗೊಂಡ ಸಂದರ್ಭದಲ್ಲಿ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸಾಗಿಸುವ ಮೂಲಕ ವ್ಯಕ್ತಿಯ ಪ್ರಾಣವನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಅವಕಾಶ ಸಿಕ್ಕ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಪ್ರಥಮ ಚಿಕಿತ್ಸೆಯನ್ನು ನೀಡಿ ಹಾಗೂ ಇತರರಿಗೂ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿಸಿಕೊಡಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಕೆಎಂಸಿ ಅತ್ತಾವರ ಆಸ್ಪತ್ರೆಯ ತುರ್ತು ವಿಭಾಗದ ಡಾ. ನಿಖಿಲ್ ಪೌಲ್ ಹಾಗೂ ಮಂಗಳೂರು ಕೆಎಂಸಿ ಅತ್ತಾವರ ಆಸ್ಪತ್ರೆಯ ಹಿರಿಯ ಅಧಿಕಾರಿ ಕಾರ್ತಿಕ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವರ್ಡ್ ಕ್ಯಾನ್ಸರ್ ಡೇ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಲ್ಕು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಬಳಿಕ ಮುಖ್ಯ ಅತಿಥಿಗಳಿಂದ ಯಾವ ಸಂದರ್ಭದಲ್ಲಿ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುವುದರ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಿದರು.
ಐಕ್ಯೂಎಸಿ ಸಹ ಸಂಯೋಜಕರಾದ ಡಾ. ಜೋತಿಪ್ರಿಯಾ ಪಿ., ಯುವ ರೆಡ್‌ಕ್ರಾಸ್‌ನ ಅಧಿಕಾರಿಗಳಾದ ನಯನ ಕುಮಾರಿ ಕೆ., ಡಾ. ಅಶೋಕ್ ಸಿ.ಹೆಚ್., ಜೋತಿ ಪಿ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನನ್ಯ ಸ್ವಾಗತಿಸಿದರು. ಕಾವೇರಿ ನಿರೂಪಿಸಿ, ನಿಶಾನ್ ವಂದಿಸಿದರು.













