Mangalore: ಸ್ವಚ್ಛತಾ ಕಾರ್ಮಿಕರು ನಗರ ಪ್ರದೇಶದ ಜೀವನಾಡಿಗಳು
ಪೌರ ಕಾರ್ಮಿಕರ ಕಷ್ಟ ಆಲಿಸಿದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು: ಸ್ವಚ್ಛತಾ ಕಾರ್ಮಿಕರು ನಗರ ಪ್ರದೇಶದ ಜೀವನಾಡಿಗಳು. ಒಂದು ದಿನ ಅವರಿಲ್ಲದಿದ್ದರೆ, ನಗರದ ಸ್ಥಿತಿ ನಾಗರಿಕರ ಅರಿವಿಗೆ ಬರುತ್ತದೆ. ಪ್ರಧಾನಿ ಮೋದಿಯವರು ಸ್ವಚ್ಛ ಭಾರತಕ್ಕೆ ಕರೆಕೊಟ್ಟಾಗ, ಅದನ್ನು ಯಥಾವತ್ ಪಾಲಿಸಿದವರು ಸ್ವಚ್ಛತಾ ಕಾರ್ಮಿಕರು. ಕೊರೊನಾ ಸಂದರ್ಭದಲ್ಲಂತೂ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದವರು. ಸಮಾಜದ ಮೊದಲ ಸ್ತರದಲ್ಲಿರುವ ಸ್ವಚ್ಛತಾ ಕಾರ್ಮಿಕರನ್ನು ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭೇಟಿಯಾಗಿ ಸಂವಾದ ನಡೆಸಿದರು.
ಮಂಗಳೂರು ನಗರದಲ್ಲಿ ಬುಧವಾರ ಬೆಳಗ್ಗೆ ಏಳು ಗಂಟೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರನ್ನು ಭೇಟಿಯಾದ ಬ್ರಿಜೇಶ್ ಚೌಟ ಅವರ ನೋವು ಕಷ್ಟಗಳನ್ನು ಕೇಳಿ ತಿಳಿದುಕೊಂಡರು. ಮೊದಲ ಬಾರಿಗೆ ಎನ್ನುವಂತೆ ಸಂಸದ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರು ನಗರ ಸ್ವಚ್ಛತೆಯನ್ನೇ ತಮ್ಮ ಜೀವನ ವ್ರತ ಮಾಡಿಕೊಂಡಿರುವ ಜನರೊಂದಿಗೆ ಬೆರೆತಿದ್ದಾರೆ. ಮೋದಿಯವರು ಸ್ವತಃ ಪೊರಕೆ ಹಿಡಿದು ಗುಡಿಸಿ, ಸ್ವಚ್ಛತೆ ಜೀವನದ ಪ್ರಮುಖ ಅಂಗವೆಂದು ಸಾರಿದ್ದರು. ಕೊರೊನಾ ಸೋಂಕು ಆವರಿಸಿದ ಸಂದರ್ಭದಲ್ಲಂತೂ ಸ್ವಚ್ಛತಾ ಕಾರ್ಮಿಕರನ್ನು ಕೊರೊನಾ ವಾರಿಯರ್ಸ್ ಎಂದು ಶ್ಲಾಘಿಸಿದ್ದನ್ನು ಬ್ರಿಜೇಶ್ ಚೌಟ ನೆನಪಿಸಿದರು.
ಮೋದಿ ಮೂರನೇ ಬಾರಿಗೆ ಈ ದೇಶದ ಪ್ರಧಾನಿ ಸ್ಥಾನಕ್ಕೇರುತ್ತಿದ್ದು, ಈ ಸಂದರ್ಭದಲ್ಲಿ ನಿಮ್ಮೆಲ್ಲರ ಸಹಮತ ಬೇಕಾಗಿದೆ. ಜನಸಾಮಾನ್ಯರು ನಿದ್ದೆಯಿಂದ ಏಳುವ ಮೊದಲೇ ನಗರವನ್ನು ಗುಡಿಸಿ ಸ್ವಚ್ಛ ಮಾಡಿಸುವ ಕಾರ್ಮಿಕರ ಬಗ್ಗೆ ಮೋದಿಗೆ ಪ್ರೀತಿ ಇದೆ. ನೀವೆಲ್ಲ ಮೋದಿ ಪರವಾಗಿ ಮತ ನೀಡಿ, ದೇಶದ ಭದ್ರತೆಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ನಿಮ್ಮ ಕಷ್ಟಗಳನ್ನು ಕೇಳಲು ಇಲ್ಲಿ ನಾನಿದ್ದೇನೆ. ಮಂಗಳೂರು ಮಹಾನಗರ ಸ್ವಚ್ಛವಾಗಿಡಲು ನಿಮ್ಮ ಕೊಡುಗೆ ಅಪಾರ ಎಂದು ಕಾರ್ಮಿಕರ ಮಾತುಗಳನ್ನು ಆಲಿಸುತ್ತ ಮತಯಾಚನೆ ಮಾಡಿದರು.
ಕಾರ್ಮಿಕರು ಇದೇ ವೇಳೆ ತಮ್ಮನ್ನು ಖಾಯಂ ಮಾಡಬೇಕೆಂದು ಬ್ರಿಜೇಶ್ ಚೌಟರಿಗೆ ಮನವಿಯನ್ನೂ ನೀಡಿದರು. ಅಲ್ಲದೆ, ತಮಗೆ ಮೋದಿ ಮೇಲೆ ಭರವಸೆ ಇದೆ, ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಮೋದಿಗಾಗಿ ಓಟು ಹಾಕುತ್ತೇವೆ ಎಂದರು.