Udupi: ನೇಹಾ ಹತ್ಯೆಗೈದವನನ್ನು ಗಲ್ಲಿಗೇರಿಸಿ: ಸಂಧ್ಯಾ ರಮೇಶ್
ಉಡುಪಿ: ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನುಷ ಹತ್ಯೆಗೆ ಫಯಾಜ್ ನೇರ ಹೊಣೆ ಎಂಬುದು ಜಗಜ್ಜಾಹೀರಾಗಿದ್ದರೂ ಕಾಂಗ್ರೆಸ್ ಸರಕಾರ ಕೇವಲ ಮುಸ್ಲಿಂ ಸಮುದಾಯವನ್ನು ಓಲೈಸಲು ಪ್ರಕರಣವನ್ನು ಹಗುರವಾಗಿ ಪರಿಗಣಿಸಿ, ಹತ್ಯೆಗೀಡಾದ ಹೆಣ್ಣು ಮಗಳ ಚಾರಿತ್ರ್ಯಹರಣ ಮಾಡಲು ಮುಂದಾಗಿರುವುದು ಅತ್ಯಂತ ಖಂಡನೀಯ. ಸರಕಾರ ಆರೋಪಿ ವಿರುದ್ಧ ಶೀಘ್ರ ಕಾನೂನಾತ್ಮಕ ಕ್ರಮವನ್ನು ಜರುಗಿಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಆಗ್ರಹಿಸಿದ್ದಾರೆ.
ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಚೇರಿ ಬಳಿ ಮೊಂಬತ್ತಿ ಉರಿಸಿ ನಡೆದ ಶ್ರದ್ಧಾಂಜಲಿ ಮತ್ತು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಅತಿಯಾದ ಮುಸ್ಲಿಂ ತುಷ್ಟಿಕರಣವೇ ಇಂಥ ಘಟನೆಗಳು ನಡೆಯಲು ಕಾರಣ. ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ. ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಮಗಳಿಗೆ ನ್ಯಾಯ ಒದಗಿಸಲಾಗದ ಕಾಂಗ್ರೆಸ್ ಸರಕಾರಕ್ಕೆ ನಾಚಿಕೆಯಾಗಬೇಕು. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡುತ್ತೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಯೋತ್ಪಾದಕರು, ಬಾಂಬ್ ಇಡುವವರನ್ನು ಅಮಾಯಕರು, ಮೈ ಬ್ರದರ್ಸ್ ಎನ್ನುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇವಲ ಮುಸ್ಲಿಮರ ಓಟಿನಿಂದ ಗೆದ್ದು ಬಂದಿದ್ದಾರೆಯೇ ಎಂದು ಹಿಂದೂ ಸಮುದಾಯ ಗಂಭೀರವಾಗಿ ಆಲೋಚಿಸಿ ಚುನಾವಣೆಯಲ್ಲಿ ಮತ ಚಲಾಯಿಸುವ ಕಾಲ ಸನ್ನಿಹಿತವಾಗಿದೆ ಎಂದರು.
ಗೃಹ ಸಚಿವರಿಗೆ ಕರುಣೆಯ ಸಂವೇದನೆಯೇ ಇಲ್ಲ ಎನ್ನುವುದು ಮತ್ತೊಮ್ಮೆ ಅವರ ಹೇಳಿಕೆಯಿಂದ ಸಾಬೀತಾಗಿದೆ. ಇಂಥ ಘಟನೆಗಳು ಮುಂದೆ ನಡೆಯದಂತೆ ಜಿಹಾದಿಗಳು ಮತ್ತು ಮತಾಂಧರಿಗೆ ಭಯ ಹುಟ್ಟಿಸುವ ಕಾರ್ಯಾಚರಣೆ ನಡೆಸಬೇಕು ಎಂದವರು ಆಗ್ರಹಿಸಿದರು
ಉಡುಪಿ ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸರೋಜ ಶೆಣೈ ಮತ್ತು ಶಾಂತಿ ಮನೋಜ್, ಉಪಾಧ್ಯಕ್ಷರಾದ ಪೂರ್ಣಿಮಾ ಶೆಟ್ಟಿ, ಮಾಯಾ ಕಾಮತ್, ಯಶೋದ ರಾಜ್, ಪ್ರಭಾ ರಾವ್, ವಿದ್ಯಾ ಶ್ಯಾಮಸುಂದರ್, ಪ್ರೀತಿ, ದೀಪಾ ಪೈ ಮೊದಲಾದವರಿದ್ದರು.