Mangalore: ಅಂಬೇಡ್ಕರ್ ಅವರ ಸಾಧನೆಗಳನ್ನು ಮರೆಯುವುದು ಒಂದು ಆತಂಕದ ವಿಷಯ: ಎಲ್.ಎನ್. ಮುಕುಂದರಾಜ್
ಮಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಧನೆಗಳನ್ನು ಮರೆಯುವುದು ಒಂದು ಆತಂಕದ ವಿಷಯ. ಪ್ರಪಂಚದ ಆರ್ಥಿಕತೆ, ಸಾಮಾಜಿಕ ನ್ಯಾಯ, ಜ್ಞಾನ ಮತ್ತು ಮಾನವವೀಯತೆ ಮತ್ತು ಸಮಾನತೆಗೆ ಸಂಬಂಧಪಟ್ಟಂತೆ ಯಾವ ಯಾವ ವಿಶೇಷಣಗಳಿವೆಯೋ, ಅವೆಲ್ಲದಕ್ಕೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಪಾತ್ರರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ಅವರು ಮೆಸ್ಕಾಂ ಮತ್ತು ಕ.ವಿ.ಮಂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯು ಜಂಟಿಯಾಗಿ ಮೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ಎ.14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮ ದಿನವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ದಕ್ಷಿಣ ಕನ್ನಡದ ಇತಿಹಾಸವನ್ನು ಮೆಲುಕು ಹಾಕಿದ ಅವರು ಕೆದಂಬಾಡಿ ರಾಮಯ್ಯ, ಗುಡ್ಡಮನೆ ಅಪ್ಪಯ್ಯ ಗೌಡ ಮತ್ತು ಕುದ್ಮುಲ್ ರಂಗರಾವ್ ಅವರನ್ನು ಸ್ಮರಿಸಿದರು. ಚರಿತ್ರೆಯನ್ನು ಮರೆಯುವುದು ಖಂಡಿತಾ ಸಲ್ಲ. ಯಾರು ಚರಿತ್ರೆಯನ್ನು ಮರೆಯುತ್ತಾರೋ ಅವರು ಚರಿತ್ರೆಯನ್ನು ಬರೆಯಲಾರರು. ನಾವು ನಮ್ಮ ದೇಶದ ಚರಿತ್ರೆ, ಭಾಷೆಯ ಚರಿತ್ರೆ, ನಾಡಿನ, ಕುಟುಂಬದ ಮತ್ತು ನಮ್ಮ ಚರಿತ್ರೆಯನ್ನು ಮರೆಯಬಾರದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಮಾತನಾಡಿ, ಡಾ. ಬಿ.ಆ.ರ್. ಅಂಬೇಡ್ಕರ್ ಅವರು ತನ್ನ ಎಲ್ಲ ಸ್ವಾರ್ಥವನ್ನು ತ್ಯಜಿಸಿ, ತನ್ನ ಇಡೀ ಬದುಕನ್ನು ಸಮಾಜಕ್ಕಾಗಿ, ಸಮಾನತೆಗಾಗಿ ಮುಡಿಪಾಗಿಟ್ಟರು. ಇಂದು ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ ಎಂದರೆ ಅದು ನಮ್ಮ ಸಂವಿಧಾನದಿಂದ ಎಂದರು.
ಸಮಾನತೆಗಾಗಿ ಮುಡಿಪಾಗಿಟ್ಟರು. ಇಂದು ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ ಎಂದರೆ ಅದು ನಮ್ಮ ಸಂವಿಧಾನದಿಂದ ಎಂದರು.
ಮುಖ್ಯ ಅರ್ಥಿಕ ಅಧಿಕಾರಿ ಮೌರೀಸ್ ಡಿ’ಸೋಜಾ, ಆರ್ಥಿಕ ಸಲಹೆಗಾರ ಹರಿಶ್ಚಂದ್ರ. ಬಿ, ಮುಖ್ಯ ಇಂಜಿನಿಯರ್ ಪುಷ್ಪಾ ಎಸ್.ಎ., ಮೆಸ್ಕಾಂ ಜಾಗೃತದಳದ ಪೊಲೀಸ್ ಉಪಾಧೀಕ್ಷಕ ಜೈಶಂಕರ್, ಉಪಾಧ್ಯಕ್ಷ ರಾಜೇಶ್, ಪ್ರಮುಖರಾದ ತೇಜಸ್ವಿ ಬಿ.ಆರ್, ನವೀನ್ ಕುಮಾರ್, ಶ್ರೀನಿವಾಸಪ್ಪ, ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ಪ್ರಧಾನ ವ್ಯವಸ್ಥಾಪಕ ಉಮೇಶ್ ಸ್ವಾಗತಿಸಿದರು. ಶ್ರೀನಿವಾಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಿಆರ್‌ಓ ವಸಂತ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.