Mangalore: ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನಕ್ಕೆ ಅಪಾಯ: ವಿಶ್ವಾಸ್ ಕುಮಾರ್ ದಾಸ್
ಮಂಗಳೂರು: ಈಗಾಗಲೇ ಬಿಜೆಪಿ ಸರ್ಕಾರ ಭಾರತದ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದು, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ನಮ್ಮ ಸಂವಿಧಾನಕ್ಕೆ ಅಪಾಯವಿದೆ ಎಂದು ದ.ಕ. ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಆರೋಪಿಸಿದರು.
ಅವರು ಎ.23 ರಂದು ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಬಿಜೆಪಿ ಸರ್ಕಾರ ತಮ್ಮ ಸ್ವಾರ್ಥ ಸಾಧನೆಗೆ ಯಾವುದೇ ದಾಖಲೆಗಳಿಲ್ಲದಿದ್ದರು ದೇಶದ ನಾಯಕರುಗಳನ್ನು ಬಂಧಿಸುತ್ತಿದ್ದಾರೆ. ಅವರು ಕಳೆದ 10 ವರ್ಷದಲ್ಲಿ ಯಾವುದಕ್ಕೂ ಉತ್ತರ ನೀಡಿಲ್ಲ. ಮೋದಿಯವರಿಗೆ ಧೈರ್ಯವಿದ್ದಲ್ಲಿ ಮಾಧ್ಯಮದ ಮುಂದೆ ಬಂದು ಮಾತನಾಡಲಿ ಎಂದು ಸವಾಲು ಹಾಕಿದರು.
ಈ ಬಾರಿ ಜಿಲ್ಲೆಯಲ್ಲಿ ಪದ್ಮರಾಜ್ ಆರ್. ಪೂಜಾರಿ ಅವರು ಹೆಚ್ಚು ಮತಗಳಿಂದ ಗೆದ್ದು ಬರಲಿದ್ದಾರೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರೊಂದಿಗೆ ಒಡನಾಟದಲ್ಲಿ ಇದ್ದು, ಮತ್ತೊಮ್ಮೆ ಪೂಜಾರಿ ಅವರ ಆಡಳಿತವನ್ನು ನೋಡಲು ಪೂಜಾರಿ ಅವರ ಶಿಷ್ಯ ಪದ್ಮರಾಜ್ ಅವರನ್ನು ಗೆಲ್ಲಿಸಬೇಕು. ಕಳೆದ 33 ವರ್ಷದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಂಸದರು ಇರಲಿಲ್ಲ, 33 ವರ್ಷದ ಮೊದಲು ನಮ್ಮ ನಾಯಕರು ಮಾಡಿದ ಕೆಲಸವನ್ನು ಬಿಟ್ಟರೆ ಬಿಜೆಪಿಯ ಸಂಸದರು ಯಾವ ಒಂದು ಅಭಿವೃದ್ಧಿಯ ಕೆಲಸವನ್ನೂ ಮಾಡಿಲ್ಲ. ಮತ್ತೆ ಜಿಲ್ಲೆಯಲ್ಲಿ ಅಭಿವೃದ್ಧಿಯಾಗಬೇಕಾದರೆ ಪದ್ಮರಾಜ್ ಅವರು ಗೆಲ್ಲಬೇಕು. ಆದುದರಿಂದ ಹಿಂದುಳಿದ ವರ್ಗದವರೆಲ್ಲ ಪದ್ಮರಾಜ್ ಅವರಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು.
ಪದ್ಮರಾಜ್ ಅವರು ಗುರು ಬೆಳದಿಂಗಳು ಚಾರಿಟೇಬಲ್ ಟ್ರಸ್ಟ್‌ನ್ನು ಸ್ಥಾಪಿಸಿ ಆ ಮೂಲಕ ಬಡವರ ಸೇವೆಯನ್ನು ಮಾಡುತ್ತಿದ್ದು, ಕುದ್ರೋಳಿ ದೇವಸ್ಥಾನದ ಟ್ರಸ್ಟಿಯಾಗಿ ದೇವಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ದೇವರ ಸೇವೆಯನ್ನೂ ಮಾಡುತ್ತಿದ್ದಾರೆ ಎಂದ ಅವರು ರಾಜ್ಯದಲ್ಲಿ ಕೇವಲ 7 ತಿಂಗಳುಗಳಲ್ಲಿ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು, ಜನರು ಈ ಬಾರಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಉದಯ್ ಆಚಾರ್, ಶಾಂತಲ ಗಟ್ಟಿ, ಶೋಭಾ ರಾಜೇಶ್, ಯೋಗೀಶ್, ರಮಾನಾಥ್, ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರಪತಿಗಳಿಗೆ ಅವಮಾನ:
ಬಿಜೆಪಿ ಸರ್ಕಾರದಲ್ಲಿ ತನ್ನ ಪ್ರಚಾರಕ್ಕಾಗಿ ಅತ್ಯಂತ ಕೆಳ ವರ್ಗದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಅವರಿಗೆ ಯಾವುದೇ ಸ್ಥಾನಮಾನ ನೀಡದೆ, ಅವರಿಗೆ ಅವಮಾನ ಮಾಡುತ್ತಿದ್ದಾರೆ. -ವಿಶ್ವಾಸ್ ಕುಮಾರ್ ದಾಸ್, ಅಧ್ಯಕ್ಷರು, ದ.ಕ. ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗ.
