Putturu: ಪುತ್ತೂರಿನಲ್ಲಿ ‘ಅಣ್ಣಾಮಲೈ’ ಬೃಹತ್ ರೋಡ್ ಶೋ
ಪುತ್ತೂರು: ಲೋಕಸಭಾ ಚುನಾವಣೆಗೆ ಇನ್ನು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದ್ದು, ಜನತೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಂಗಳವಾರ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಬೃಹತ್ ರೋಡ್ ಶೋ ನಡೆಸಿದರು.
ಪುತ್ತೂರಿನ ದರ್ಬೆವೃತ್ತದಿಂದ ಪ್ರಾರಂಭಗೊಂಡ ಬಿಜೆಪಿ ಈ ರೋಡ್‌ಶೋ ಮುಖ್ಯರಸ್ತೆಯಲ್ಲಿ ಸಾಗಿ ಪುತ್ತೂರು ಬಸ್ ನಿಲ್ದಾಣದ ತನಕ ಸಾಗಿ ಬಂತು. ಈ ಸಂದರ್ಭದಲ್ಲಿ ಅಣ್ಣಾಮಲೈ ಅವರು ಮಾತನಾಡಿ, ದಕ ಜಿಲ್ಲೆ ನಾಯಕತ್ವ ನೀಡುವ ಜಿಲ್ಲೆಯಾಗಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ರೆಕಾರ್ಡ್ ಮಾದರಿಯಲ್ಲಿ ಗೆಲ್ಲಿಸಬೇಕು. ಕಳೆದ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭ ಜಿಲ್ಲೆಯಲ್ಲಿ ಶೇ.79 ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಕನಿಷ್ಠ ಶೇ.85 ಮತದಾನವಾಗಬೇಕು. ಹಾಗಿದ್ದಾಗ ಮಾತ್ರ ಭಾರೀ ಅಂತರದಿಂದ ಬಿಜೆಪಿ ಗೆಲುವು ಪಡೆಯಲಿದೆ. ಮೋದಿಯನ್ನು ಪ್ರೀತಿಸುವ ಎಲ್ಲರೂ ಯಾವುದೇ ಕಾರಣಕ್ಕೂ ಮತದಾನ ಮಾಡುವುದನ್ನು ತಪ್ಪಿಸಬೇಡಿ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗುತ್ತಾರೆ ಎಂಬುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಿದ್ದರೂ ಇಷ್ಟೊಂದು ಬಿಸಿಲಲ್ಲೂ ನಾವ್ಯಾಕೆ ಕಷ್ಟಪಡಬೇಕು ಎಂದು ಯೋಚನೆ ಮಾಡಬೇಡಿ. ಈ ಕಷ್ಟ ಪಡುವ ಮೂಲಕ 400 ಸ್ಥಾನಗಳನ್ನು ಬಿಜೆಪಿ ಕೊಟ್ಟು ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕೆಲವು ಕಾಂಗ್ರೇಸ್ ಮಂದಿ ಚೊಂಬು ಹಿಡಿದುಕೊಂಡು ಹೋಗುತ್ತಿದ್ದರು. ‘ನಾನು ಕೇಳಿದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇಷ್ಟೊಂದು ಟಾಯಿಲೆಟ್‌ಗಳನ್ನು ಕಟ್ಟಿಸಿಕೊಟ್ಟಿದ್ದರೂ ನೀವ್ಯಾಕೆ ಇನ್ನೂ ಚೊಂಬು ಹಿಡಿದುಕೊಂಡು ಹೋಗುತ್ತೀರಿ’ ಎಂದು ಅವರು ಕಾಂಗ್ರೆಸ್‌ನ ಚೊಂಬು ಪ್ರತಿಭಟನೆ ಕುರಿತು ವ್ಯಂಗ್ಯವಾಡಿದರು. ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಜನ ಬೆಲೆ ನೀಡಲ್ಲ. ಕಾಂಗ್ರೆಸ್ ವ್ಯಾರಂಟಿಯೇ ಇಲ್ಲದ ಪಕ್ಷವಾಗಿದೆ. ಅದರ ಗ್ಯಾರಂಟಿಗೆ ಎಲ್ಲಿದೆ ಗ್ಯಾರಂಟಿ ಎಂದು ಅಣ್ಣಾಮಲೈ ಹೇಳಿದರು.
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ, ಮೋದಿ ಗೆಲುವಿಗಾಗಿ, ರಾಜ್ಯದ ಭವಿಷ್ಯಕ್ಕಾಗಿ, ಹಿಂದುತ್ವಕ್ಕಾಗಿ ಈ ಮಹತ್ವಪೂರ್ಣ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡುವ ಮೂಲಕ ಬೆಂಬಲಿಸಬೇಕು. ಈ ರೋಡ್ ಶೋ ಹಿಂದೂ ಸಮಾಜದ ಶಕ್ತಿ ಪ್ರದರ್ಶನವಾಗಿದ್ದು, ನನಗೆ ಮತ್ತಷ್ಟು ಧೈರ್ಯ ತಂದಿದೆ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕಾದರೆ ನಾವೆಲ್ಲಾ ಒಗ್ಗಟ್ಟಿನಿಂದ ಮತ ಚಲಾವಣೆ ಮಾಡಬೇಕಾಗಿದೆ. ಮಹಿಳೆಯರೇ ಮೋದಿ ಅವರಿಗೆ ರಕ್ಷಾಕವಚ. ಜಿಲ್ಲೆಯಲ್ಲಿ ಐತಿಹಾಸಿಕ ಗೆಲುವು ದಾಖಲಾಗಲು ನಿಮ್ಮೆಲ್ಲರ ಪೂರ್ಣ ಸಹಕಾರ ಬೇಕಾಗಿದೆ ಎಂದರು.
ರೋಡ್‌ಶೋ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಭಾಗಿಯಾಗಿದ್ದರು.
‘ಪುತ್ತಿಲ’ ಬೆಂಬಲಿಗರಿಂದ ಅದ್ದೂರಿ ಸ್ವಾಗತ:
ಅಣ್ಣಾಮಲೈ ಅವರು ಕಡಬದಲ್ಲಿ ರೋಡ್ ಶೋ ಮುಗಿಸಿ ಪುತ್ತೂರಿಗೆ ಆಗಮಿಸುವ ಸಂದರ್ಭ ನರಿಮೊಗರು ಅರುಣ್ ಕುಮಾರ್ ಪುತ್ತಿಲ ಅವರ ಮನೆಯ ಬಳಿಯಲ್ಲಿ ಅಣ್ಣಾಮಲೈ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಅಣ್ಣಾಮಲೈ ಅವರಿಗೆ ಪೇಟ ತೊಡಿಸಿ ಶಾಲು ಹಾಕಿ ಸ್ವಾಗತಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಭಾಗಿಯಾಗಿದ್ದರು.