Mangalore: ಸಮಾನ ಮನಸ್ಕ ಸಂಘಟನೆಗಳ ‘ಜನ ಸಮಾವೇಶ’
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನು ಸೋಲಿಸುವ ಪ್ರತಿಜ್ಞೆಯೊಂದಿಗೆ ಆಪ್, ಸಿಪಿಐ, ಸಿಪಿಎಂ, ಜನತಾದಳವನ್ನು ಒಳಗೊಂಡ ಜಾತ್ಯತೀತ ಪಕ್ಷಗಳು ಹಾಗೂ ಜಿಲ್ಲೆಯ ವಿವಿಧ ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು ವೇದಿಕೆಯಲ್ಲಿ ಐಕ್ಯ ಪ್ರದರ್ಶಿಸಿದ್ದಾರೆ.
ಸೋಮವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಜನ ಸಮಾವೇಶದಲ್ಲಿ ಜಿಲ್ಲೆಯ ನೈಜ ಅಭಿವೃದ್ಧಿ ಹಾಗೂ ಸೌಹಾರ್ದಕ್ಕಾಗಿ ೨೫ರಷ್ಟು ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರತಿನಿಧಿಗಳು ಪರಸ್ಪರ ಕೈಜೋಡಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು. ಈ ಸಂದರ್ಭ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ಜತೆ ಗುರುತಿಸಿಕೊಂಡಿರುವ ಜನತಾ ದಳದ ಜಿಲ್ಲಾ ಘಟಕದ ಪ್ರಮುಖರು ನಝೀರ್ ಉಳ್ಳಾಲ್ ನೇತೃತ್ವದಲ್ಲಿ ಜನ ಸಮಾವೇಶದಲ್ಲಿ ದ.ಕ. ಜಿಲ್ಲಾ ಜನತಾ ಪರಿವಾರದ ಹೆಸರಿನಲ್ಲಿ ಬೆಂಬಲ ಸೂಚಿಸಿದರು. ಈ ಸಂದರ್ಭ ಜನಪರ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯನ್ನು ಚುನಾಯಿಸುವಂತೆ ಜನರಿಗೆ ಮನವಿ ಮಾಡುವ ಕರಪತ್ರವನ್ನು ಜನ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಯಿತು.
ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಕೊರೋನ ಸಂಕಷ್ಟದ ನಡುವೆ ನಿರುದ್ಯೋಗ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳಿಂದಾಗಿ ಉಸಿರಾಡುವಂತಾಗಿದೆ. ಆದರೆ ಗ್ಯಾರಂಟಿಗಳನ್ನು ವಿರೋಧಿಸುವ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದ ಶಾಸಕರನ್ನು ಅಪರೇಶನ್ ಕಮಲದ ಮೂಲಕ ಖರೀದಿಸಿ ಸರಕಾರವನ್ನು ಅಸ್ತಿರಗೊಳಿಸಿ ಗ್ಯಾರಂಟಿಗಳನ್ನೇ ಬಂದ್ ಮಾಡಲಿದ್ದಾರೆ ಎಂದು ಹೇಳಿದರು.
ಚುನಾವಣೆಯಲ್ಲಿ ಅಭಿವೃದ್ಧಿ, ಬದುಕಿನ ಸಮಸ್ಯೆಗಳಬದಲಿಗೆ ಧರ್ಮಗಳ ಧ್ರುವೀಕರಣ, ತನ್ನ ರಾಜಕೀಯ ಟೂಲ್ ಕಿಟ್ ಗಾಇ ಹಿಂದುತ್ವವನ್ನೇ ಮುನ್ನಲೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲಾ ಜನಸಾಮಾನ್ಯರು ತಕ್ಕ ಉತ್ತರ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಸಿಪಿಐ ಮುಖಂಡ ಬಿ. ಶೇಖರ್, ಜನತಾ ಪರಿವಾರದ ನಝೀರ್ ಉಳ್ಳಾಲ್ ಮಾತನಾಡಿದರು. ಸಮಾವೇಶದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಮತ್ತು ಮುನೀರ್ ಕಾಟಿಪಳ್ಳ ಅವರ ‘ಕರಾವಳಿ ಪತನ ಚರಿತ್ರೆ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ದೇವದಾಸ್, ಯಾದವ ಶೆಟ್ಟಿ, ಜೆ. ಬಾಲಕೃಷ್ಮ ಶೆಟ್ಟಿ, ಸೀತಾರಾಮ ಬೇರಿಂಜ, ಅಶ್ರಫ್ ಕೆ., ಆಲ್ವಿನ್ ಡಿಸೋಜ, ಅಶ್ರಫ್ ಕಲ್ಲೇಗ, ಬಿಕೆ ಇಮ್ತಿಯಾಝ್, ಜಯಂತಿ ಬಿ. ಶೆಟ್ಟಿ, ಮಂಜುಳಾ ನಾಯಕ್, ದಿನೇಶ್ ಹೆಗ್ಡೆ ಉಳೇಪಾಡಿ, ಯಶವಂತ ಮರೋಳಿ, ಕರಿಯ ಕೆ., ಕೇಶವತಿ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಎಐಟಿಯುಸಿ, ಸಿಐಟಿಯುಸಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಎಸ್‌ಎಫ್‌ಐ, ಡಿವೈಎಫ್ ಐ, ಎಐವೈಎಫ್, ಜೆಎಂಎಸ್, ಎನ್‌ಎಫ್‌ಐಡಬ್ಲು, ದಲಿತ ಹಕ್ಕುಗಳ ಸಮಿತಿ, ದಲಿತ ಸಂಘರ್ಷ ಸಮಿತಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಸಮುದಾಯ ಮಂಗಳೂರು, ಇಷ್ಟಾ ಮಂಗಳೂರು, ಅಖಿಲ ಭಾರತ ವಕೀಲರ ಸಂಘ, ಮಾನವತಾ ವೇದಿಕೆ, ಪ್ರಗತಿಪರ ಚಿಂತಕರ ವೇದಿಕೆ, ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಸಾಮರಸ್ಯ ಮಂಗಳೂರು, ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ, ದ.ಕ. ಜಿಲ್ಲಾ ವಿಚಾರವಾದಿಗಳ ಸಂಘ, ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿ, ಸೌಹಾರ್ದ ಮಹಿಳಾ ವೇದಿಕೆ, ಗುರು ಬೆಳದಿಂಗಳು ಫೌಂಡೇಶನ್, ಮುಸ್ಲಿಮ್ ಐಕ್ಯತಾ ವೇದಿಕೆ, ಸುನ್ನಿ ಯುವಜನ ಸಂಘ, ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ್, ದ.ಕ. ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್, ಪ್ರಗತಿಪರ ಅಧ್ಯಾಪಕರ ವೇದಿಕೆ, ನಾರಾಯಣಗುರು ವಿಚಾರ ಕಮ್ಮಟ, ಕರಾವಳಿ ವೃತ್ತಿನಿರತ ಅಲೆಮಾರಿ ಹಕ್ಕುಗಳ ಸಮಿತಿಯ ಪ್ರತಿನಿಧಿಗಳು ಭಾಗವಹಿಸಿದ್ದರು.