Mangalore: ಕುಮಾರಸ್ವಾಮಿ ಎರಡು ಮನೆಯಲ್ಲಿ ಕಾಲಿಟ್ಟಿದ್ದಾರೆ: ಶಾಲೆಟ್ ಪಿಂಟೋ
ಮಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ತೆನೆಹೊತ್ತ ಮಹಿಳೆಯನ್ನು ಬಿಟ್ಟು ಈಗ ಬಿಜೆಪಿ ಹಿಂದೆ ಹೋಗಿದ್ದು, ಎರಡು ಮನೆಗೆ ಕಾಲಿಟ್ಟಿದ್ದಾರೆ ಎಂದು ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಹೇಳಿದರು.
ಅವರು ಎ.15 ರಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಕೊಡುವ 2000 ರೂ.ನಿಂದ ಹಳ್ಳಿಯ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಯಾವ ಮಹಿಳೆ ದಾರಿ ತಪ್ಪಿದ್ದಾರೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಹೇಳಿಕೆಯನ್ನು ಮಹಿಳಾ ಕಾಂಗ್ರೆಸ್ ಮಾತ್ರವಲ್ಲ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಪಡೆಯುತ್ತಿರುವ ಪ್ರತಿಯೊಂಬ್ಬ ಮಹಿಳೆಯೂ ಇದನ್ನು ಖಂಡಿಸುತ್ತಾರೆ. ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಓರ್ವ ವ್ಯಕ್ತಿಯಿಂದ ಇಂತಹ ಮಾತುಗಳು ಶೋಭೆ ತರುವುದಿಲ್ಲ. ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಬೇಕು ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಈ ಬಾರಿ ಕಾಂಗ್ರೆಸ್ ಗೆ ಮಹಿಳೆಯರು ಮತ ನೀಡಲಿದ್ದಾರೆ ಎಂದರು.
ಗೃಹಲಕ್ಷ್ಮಿ ಯೋಜನೆಯಿಂದ ಅನೇಕರಿಗೆ ಪ್ರಯೋಜನವಾಗಿದೆ. ಎಲ್ಲೂ ಆ ಹಣ ದುರುಪಯೋಗ ಆಗಿಲ್ಲ. ದುಂದುವೆಚ್ಚವೂ ಆಗಿಲ್ಲ. ಕುಟುಂಬದ ಯಜಮಾನಿಗೆ ಸಿಗುವ ಹಣ ಸದ್ಬಳಕೆ ಆಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್‌ನ ಸುರೇಖಾ ಚಂದ್ರಹಾಸ, ಚಂದ್ರಕಲಾ ಜೋಗಿ, ತನ್ವೀರ್ ಷಾ, ಸಾರಿಕಾ ಪೂಜಾರಿ, ರೂಪಾ ಚೇತನ್, ಗೀತಾ ಅತ್ತಾವರ ಉಪಸ್ಥಿತರಿದ್ದರು.