Mangalore: ನಿರಂತರ ಸಭೆ, ಮಾಧ್ಯಮಗೋಷ್ಠಿ, ಜನಸಂಪರ್ಕದೊಂದಿಗೆ ಕಾಲ ಕಳೆದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ
ಮಂಗಳೂರು: ಚುನಾವಣೆ ಸಮಯದಲ್ಲಿ ಹಗಲು-ರಾತ್ರಿ ಎನ್ನದೇ ಶ್ರಮವಹಿಸಿ ಪ್ರಚಾರ ಕಾರ್ಯದಲ್ಲಿ ಮುಳುಗಿದ ಅಭ್ಯರ್ಥಿಗಳು ಮತದಾನ ನಂತರ ವಿಶ್ರಾಂತಿಗೆ ತೆರಳುವುದು ಸಾಮಾನ್ಯ, ಆದರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಚುನಾವಣೆಯಲ್ಲಿ ಭಾಗವಹಿಸಿದ್ದ ಪಕ್ಷದ ಮುಖಂಡರು ಹಾಗೂ ಹಿರಿಯ ನಾಯಕರನ್ನು ಭೇಟಿ ಮಾಡಿ ಧನ್ಯವಾದ ತಿಳಿಸುವ ಮೂಲಕ ದಿನ ಆರಂಭಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಚುನಾವಣಾ ಪ್ರಚಾರಕ್ಕೆ ಬೈಂದೂರಿಗೆ ತೆರಳುವ ಮಾರ್ಗಮಧ್ಯೆ ಮಂಗಳೂರು ನಗರದಲ್ಲಿ ಕ್ಯಾ. ಬ್ರಿಜೇಶ್ ಚೌಟ ಅವರು ಭೇಟಿ ಮಾಡಿ ಚುನಾವಣೆ ಪ್ರಕ್ರಿಯೆಯ ಕುರಿತು ಸಮಾಲೋಚಿಸಿದರು.
ಪಕ್ಷದ ಕಚೇರಿಗೆ ಭೇಟಿ ನೀಡಿ ಚುನಾವಣೆಯಲ್ಲಿ ಸಕ್ರೀಯವಾಗಿ ಬಾಗವಹಿಸಿದ್ದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮತದಾನದ ಬಗ್ಗೆ ವಿವರವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು. ನಂತರ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆಯಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ, ನಿಸ್ಪಕ್ಷವಾಗಿ ವರದಿ ಮಾಡಿದ ಮಾಧ್ಯಮದ ಪತ್ರಕರ್ತರಿಗೆ ಅಭಿನಂದಿಸಿದರು, ಇದೇ ಸಮಯದಲ್ಲಿ ಚುನಾವಣೆಯನ್ನು ದಕ್ಷತೆಯಿಂದ ನಿರ್ವಹಿಸಿದ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.
ನಿರ್ಮಲಾ ಟ್ರಾವೆಲ್ಸ್‌ನ ಸ್ಥಾಪಕಿ ಹಾಗೂ ಯಶಸ್ವೀ ಮಹಿಳಾ ಉದ್ಯಮಿ ಚೋಲ್ಪಾಡಿ ನಿರ್ಮಲಾ ಕಾಮತ್ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು. ರಾಮಚಂದ್ರಪುರ ಮಠದ ಮಠಾಧೀಶರಾದ ಶ್ರೀ ರಾಘವೇಶ್ವರಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕ್ಯಾ. ಬ್ರಿಜೇಶ್ ಚೌಟ, ನಿಟ್ಟೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿನಯ್ ಹೆಗ್ಡೆ ಅವನ್ನು ಭೇಟಿ ಮಾಡಿ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದ ಅವರು ವಿಶ್ರಾಂತಿ ಪಡೆಯದೇ ದಿನವಿಡೀ ಇತರೆ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಮೂಲಕ ದಿನ ಕಳೆದರು.







