Mangalore: ಕಾರ್ಮಿಕ ವರ್ಗಕ್ಕೆ ಅನ್ಯಾಯವೆಸಗಿದ ನರೇಂದ್ರ ಮೋದಿ ಸರಕಾರವನ್ನು ಕಿತ್ತೆಸೆಯಿರಿ: ಜೆ. ಬಾಲಕೃಷ್ಣ ಶೆಟ್ಟಿ
ಮಂಗಳೂರು: ಸಮಾಜದ ಅರ್ಥಿಕ ಚಕ್ರ ತಿರುಗುವಲ್ಲಿ ಪ್ರಧಾನ ಪಾತ್ರ ವಹಿಸುವ ಕಾರ್ಮಿಕ ವರ್ಗದ ವಿರುದ್ಧ ನೀತಿಗಳನ್ನು ಜಾರಿಗೊಳಿಸಿ ಬಂಡವಾಳ ಶಾಹಿಗಳ ಜೇಬು ತುಂಬಿಸುವ ನರೇಂದ್ರ ಮೋದಿ ಸರಕಾರದ ಅಚ್ಚೇದಿನ್ ಬಂದಿರುವುದು ಈ ದೇಶದ ಅಧಾನಿ ಅಂಬಾನಿಗಳಿಗೆ ಹೊರತು ಜನಸಾಮಾನ್ಯರಿಗಲ್ಲ ಎಂದು ಸಿಪಿಐಎಂನ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಸಿಪಿಐಎಂ ನೇತ್ರತ್ವದಲ್ಲಿ ಬಿಸಿರೋಡ್‌ನಲ್ಲಿ ಜರುಗಿದ ಬಂಟ್ವಾಳ ವಿಧಾನಸಭಾ ಕ್ಷೇತ್ರ ಮಟ್ಟದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 10 ವರ್ಷಗಳಲ್ಲಿ ಸಾಬೀತಾಗಿದೆ. ಇಂತಹ ಜನವಿರೋಧಿ ರೈತ ಕಾರ್ಮಿಕ ವಿರೋಧಿ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರದ ಗದ್ದುಗೇರಿದರೆ ದೇಶ ಸರ್ವನಾಶವಾಗುತ್ತದೆ. ಬಿಜೆಪಿಕೂಟವನ್ನು ಸೋಲಿಸುವ ಮೂಲಕ ಜನತೆ ಗೆಲ್ಲುವಂತಾಗಬೇಕಾದರೆ ಇಂಡಿಯಾ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಲು ದ.ಕ. ಜಿಲ್ಲೆಯ ಕಾರ್ಮಿಕ ವರ್ಗ ಒಂದಾಗಿ ನಿಲ್ಲುವ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದರು.
ದ.ಕ. ಜಿಲ್ಲೆಯಲ್ಲಿ ಅರ್ಥಿಕತೆಯ ಜೀವನಾಡಿಯಾದ ಬೀಡಿ ಉದ್ಯಮ ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಲಕ್ಷಾಂತರ ತಾಯಂದಿರ ಬದುಕು ಸಂಕಷ್ಟದಲ್ಲಿದೆ. ಇದಕ್ಕೆ ನರೇಂದ್ರ ಮೋದಿ ಸರಕಾರದ ಧೋರಣೆ ಹಾಗೂ ಕಳೆದ 33 ವರ್ಷಗಳಿಂದ ಗೆದ್ದು ಬಂದಿರುವ ಈ ಜಿಲ್ಲೆಯ ಬಿಜೆಪಿ ಸಂಸದರ ದಿವ್ಯ ಮೌನವೇ ಕಾರಣವೆಂದು ದೂರಿದರು.
ಸಿಪಿಐಎಂ ಬಂಟ್ವಾಳ ತಾಲೂಕು ಮುಖಂಡ ಬಿ. ಉದಯ ಕುಮಾರ್ ಮಾತನಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದರೂ ಕಳೆದ 33 ವರ್ಷಗಳಲ್ಲಿ ಬಿಜೆಪಿ ಯಾವುದೇ ರೀತಿಯ ಕಾರ್ಯ ನಿರ್ವಹಿಸದೆ ಘೋರ ಅನ್ಯಾಯವೆಸಗಿದೆ. ಕೇವಲ ದ್ವೇಷ ರಾಜಕಾರಣವನ್ನೇ ಬಂಡವಾಳವನ್ನಾಗಿಸಿದ ಬಿಜೆಪಿ ಮತ್ತೊಮ್ಮೆ ಗೆದ್ದರೆ ತುಳುನಾಡಿನ ಸೌಹಾರ್ದತೆ ಹಾಗೂ ಅಭಿವ್ರದ್ದಿಗೆ ಕೊಡಲಿ ಪೆಟ್ಟು ಬೀಳುವುದು ಖಂಡಿತ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಿಪಿಐಎಂನ ಹಿರಿಯ ನಾಯಕ ಚಂದ್ರ ಪೂಜಾರಿ ಬೋಳಂತೂರು ಮಾತನಾಡಿ, ಧರ್ಮ ರಾಜಕಾರಣವನ್ನೇ ಉಸಿರನ್ನಾಗಿಸಿದ ಬಿಜೆಪಿಗೆ ಈ ಬಾರಿ ಜಿಲ್ಲೆಯ ಜನತೆ ಅಭಿವೃದ್ಧಿಯ ವಿಚಾರದಲ್ಲಿ ಎತ್ತಿರುವ ಪ್ರಶ್ನೆಗೆ ಕಂಗಾಲಾಗಿದ್ದು, ಸೋಲಿನ ಭೀತಿಯಲ್ಲಿ ನರಳಾಡುತ್ತಿದೆ. ಅಂತೂ ಜಿಲ್ಲೆಯಲ್ಲಿ ಬಿಜೆಪಿ ಸೋಲದಿದ್ದರೆ ಜನತೆಗೆ ಉಳಿಗಾಲವಿಲ್ಲ ಎಂದರು.
ಸಿಪಿಐಎಂ ಬಂಟ್ವಾಳ ತಾಲೂಕು ಮುಖಂಡರಾದ ನಾರಾಯಣ ಬಡಕಬೈಲ್, ಲೋಲಾಕ್ಷಿ ಬಂಟ್ವಾಳ, ನಾರಾಯಣ ಪೈಲೋಡಿ ಮತ್ತಿತರರು ಉಪಸ್ಥಿತರಿದ್ದರು.