Mangalore: ಶಿಷ್ಯನ ಗೆಲುವು ನೋಡಬೇಕು: ಬಿ. ಜನಾರ್ದನ ಪೂಜಾರಿ
Tuesday, April 23, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿಕೊಂಡ ಮತೀಯ ಸೂಕ್ಷ್ಮ ಕೇಂದ್ರ ಎಂಬ ಹಣೆಪಟ್ಟಿ ಹೋಗಬೇಕು. ಅಧರ್ಮದ ಅಪಪ್ರಚಾರವನ್ನು ಮೆಟ್ಟಿ ನಿಂತು, ಜನರು ಸತ್ಯ - ಧರ್ಮವನ್ನು ಗೆಲ್ಲಿಸಬೇಕಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಅವರ ಗೆಲುವು ಮೂಲಕ ಯು. ಶ್ರೀನಿವಾಸ ಮಲ್ಯರು ಹಾಗೂ ಈ ನಾಡಿನ ಜನತೆಯ ಅಭಿವೃದ್ಧಿಯ ಕನಸಿಗೆ ಚೈತನ್ಯ ಸಿಗಬೇಕು. ನನ್ನ ಚಿಂತನೆಯ ನನ್ನ ಶಿಷ್ಯ ದ.ಕ. ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಗೆಲುವು ಕಣ್ಣಾರೆ ನೋಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
ಪದ್ಮರಾಜ್ ಸ್ಪರ್ಧೆಯ ಬಗ್ಗೆ ಹೇಳಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಧಾರ್ಮಿಕ, ಬೀಚ್, ಪಶ್ಚಿಮಘಟ್ಟ ಪ್ರವಾಸೋದ್ಯಮದ ನೈಸರ್ಗಿಕ ಸೌಂದರ್ಯದ ಈ ನಾಡು ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರಬೇಕಿತ್ತು. ಆದರೆ ಧರ್ಮ ಎಲ್ಲವನ್ನೂ ಒಡೆದು ಹಾಕಿದೆ. ಕಾಲ ಮಿಂಚಿ ಹೋಗಿಲ್ಲ, ಈ ಬಾರಿ ನನ್ನ ಶಿಷ್ಯನ ಗೆಲುವಿನ ಮೂಲಕ ಅಭಿವೃದ್ಧಿಯನ್ನು ನೋಡಬೇಕು ಎಂದು ಅವರು ಹೇಳಿದ್ದಾರೆ. ತುಳುನಾಡು ದೈವ-ದೇವರ ನಾಡಾಗಿದ್ದು, ಸತ್ಯ, ಧರ್ಮ, ನಿಷ್ಠೆಯೇ ಈ ನೆಲದ ಅಸ್ಮಿತೆ. ದೇವರು-ದೇವಾಲಯಗಳನ್ನೊಂಡ ಈ ನಾಡಿನಲ್ಲಿ ಪರಸ್ಪರ ದ್ವೇಷ, ಅಧರ್ಮವನ್ನು ಕೊನೆಗಾಣಿಸಿ, ಸತ್ಯ ಧರ್ಮ, ಸೌಹಾರ್ದತೆಯ ಗೆಲುವಾಗಬೇಕು ಎಂದಿದ್ದಾರೆ.