Mangalore: ಬಿಜೆಪಿ ’ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ

Mangalore: ಬಿಜೆಪಿ ’ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ


ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿರುವಾಗಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ’ನವಯುಗ-ನವಪಥ’ ಹೆಸರಿನ ತಮ್ಮ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ಆಯೋಜಿಸಿದ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಕ್ಯಾಪ್ಟನ್ ಬ್ರಿಜೇಶ್ ಚೌಟರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಾಪುಗಾಲು, ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ, ಸ್ಟಾರ್ಟ್ ಅಪ್ ಮತ್ತು ಉದ್ಯಮಶೀಲತೆ, ಪ್ರವಾಸೋದ್ಯಮ, ನಾರಿಶಕ್ತಿ, ಸಂಸ್ಕೃತಿ ಹಾಗೂ ಪರಂಪರೆ; ಕೃಷಿ, ಪಶುಸಂಗೋಪನೆ, ಮೀನುಗಾರಿಕೆ; ಯುವಜನತೆ ಮತ್ತು ಸಂವಹನ, ಕರಾವಳಿ ಅಭಿವೃದ್ಧಿ ಮತ್ತು ಭದ್ರತೆ- ಹೀಗೆ  9 ವಿಷಯಗಳನ್ನು ಒಳಗೊಂಡ ಕಾರ್ಯಸೂಚಿ ಈ ಪ್ರಣಾಳಿಕೆಯಲ್ಲಿದೆ.

ಚೌಟ ಮಾತನಾಡಿ ಇದೊಂದು ಟಾಸ್ಕ್ ಶೀಟ್ ಅಥವಾ ಕಾರ್ಯಸೂಚಿ. 9 ಫೋಕಸ್ ಏರಿಯಾಗಳನ್ನು ಮುಂದಿಟ್ಟು 2047ರ ವೇಳೆಗೆ ವಿಕಸಿತ ಭಾರತವನ್ನು ರೂಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಗೆ ಪೂರಕವಾಗಿ ವಿಕಸಿತ ’ದಕ್ಷಿಣ ಕನ್ನಡ’ವನ್ನು ಸಾಕಾರಗೊಳಿಸಲು ಈ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದರು.

ನಮ್ಮ ಮೊಟ್ಟಮೊದಲ ಆದ್ಯತೆ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 10 ವರ್ಷದ ಅವಧಿಯಲ್ಲಿ ನಮ್ಮ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಈ ಜಿಲ್ಲೆಯ ಅಭಿವೃದ್ಧಿಗೆ 1,13,000 ಕೋಟಿಗೂ ಅಧಿಕ ಅನುದಾನವನ್ನು ತಂದಿದ್ದಾರೆ. ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದ್ದು, ಮತ್ತೆ ಕೆಲವು ಪ್ರಗತಿಯಲ್ಲಿವೆ. ಅವುಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿ ಪೂರ್ಣಗೊಳಿಸುವುದರ ಜತೆಗೆ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸುವುದು ಈ ಕಾರ್ಯಸೂಚಿಯ ಉದ್ದೇಶವಾಗಿದೆ ಎಂದು  ಹೇಳಿದರು.

ಸಂಪರ್ಕ ಮತ್ತು ಮೂಲ ಸೌಲಭ್ಯದ ದೃಷ್ಟಿಯಿಂದ ಕಳೆದ 10 ವರ್ಷದಲ್ಲಿ ವಿಶೇಷವಾದ ಕೆಲಸಗಳು ಈಗಾಗಲೇ ಅನುಷ್ಠಾನದಲ್ಲಿವೆ. ಬಿ.ಸಿರೋಡ್-ಅಡ್ಡಹೊಳೆ ನಡುವಿನ ಹೆದ್ದಾರಿ  ಕಾಮಗಾರಿಯನ್ನು ಪೂರ್ತಿಗೊಳಿಸುವುದು ನಮ್ಮ ಆದ್ಯತೆ. ಅದೇ ರೀತಿ ಬಿ.ಸಿ ರೋಡ್-ಪುಂಜಾಲಕಟ್ಟೆ- ಚಾರ್ಮಾಡಿ ನಡುವಿನ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಕುಲಶೇಖರದಿಂದ ಮೂಡುಬಿದಿರೆಯಾಗಿ ಸಾಮಗ್ಲಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಸಂಪಾಖೆಯಿಂದ ಮಾಣಿ ವರೆಗಿನ ಕಾಮಗಾರಿ ಅನುಷ್ಠಾನ ಹಂತದಲ್ಲಿದೆ. ಅಂತೆಯೇ ಉಜಿರೆಯಿಂದ ಪೆರಿಯಶಾಂತಿ ವರೆಗಿನ ಹೆದ್ದಾರಿ ಕಾಮಗಾರಿ ಕೂಡ ಪ್ರಾರಂಭವಾಗುತ್ತಿದೆ. ಈ ಎಲ್ಲ ಹೆದ್ದಾರಿ ಕಾಮಗಾರಿಗಳನ್ನು ಆದ್ಯತೆಯಾಗಿ ಪೂರ್ತಿಗೊಳಿಸುವುದು ಒಂಡೆಯಾದರೆ, ಸಂಪರ್ಕ ಮತ್ತು ಮೂಲ ಸೌಕರ್ಯದಲ್ಲಿ ಮೊತ್ತ ಮೊದಲಿಗೆ ಬೆಂಗಳೂರು-ಮಂಗಳೂರು ನಡುವಿನ ಹೆದ್ದಾರಿ ಸಂಪರ್ಕ ಅಭಿವೃದ್ಧಿಪಡಿಸುವುದು ಆದ್ಯತೆಯಾಗಿದೆ. ಅದರಲ್ಲಿರುವ ಸವಾಲುಗಳನ್ನು ಹೇಗೆ ನಿರ್ವಹಿಸಬೇಕೆಂಬುದನ್ನು (ಅಡ್ಡಹೊಳೆಯಿಂದ ಮಾರನಹಳ್ಳಿ ವರೆಗಿನ ರಸ್ತೆ) ಅಧ್ಯಯನ ಮಡಲಾಗುವುದು. ಶಿರಾಡಿ ಘಾಟ್- ವೈಜ್ಞಾನಿಕ ಅಧ್ಯಯನ ಮಾಡಿ ಸಂಪರ್ಕ ರಸ್ತೆ ಮಾಡುವ ಆದ್ಯತೆ ನಮ್ಮದು. 

ಮಂಗಳೂರು-ಬೆಂಗಳೂರು ನಡುವೆ ಒಂದು ಹೊಸ ರೈಲ್ವೆ ಮಾರ್ಗದ ಕಲ್ಪನೆಯಿದೆ. ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಒಂದು ವೇಗದ ಕಾರಿಡಾರ್ ನಿರ್ಮಾಣ ಮಾಡುವ ಚಿಂತನೆಯಿದೆ. ಇದರಿಂದ ಮಂಗಳೂರು ಬಂದರಿನ ಅಭಿವೃದ್ಧಿಗೆ ಹೊಸ ವೇಗ ಸಿಗಬಹುದು. ಅದರ ಜತೆಜತೆಗೆ ಹಾಸನ, ತುಮಕೂರುಗಳ ಅಭಿವೃದ್ಧಿಗೂ ಈ ರೈಲ್ವೇ ಲೈನ್ ಮತ್ತು ರಸ್ತೆಯ ಯೋಜನೆಗಳು ಪೂರಕವಾಗಬಹುದು ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article