Mangalore: ಕಾಂಗ್ರೆಸ್ ನಿಂದ ಬೃಹತ್ ರೋಡ್ ಶೋ
ಮಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರ ಬೃಹತ್ ರೋಡ್ ಶೋ ಮಂಗಳವಾರ ಸಂಜೆ ಇಲ್ಲಿನ ಹೊಸಬೆಟ್ಟುವಿನಿಂದ ಬೈಕಂಪಾಡಿ ಎಪಿಎಂಸಿ ತನಕ ನಡೆಯಿತು.
ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಬೈಕಂಪಾಡಿ ಜಂಕ್ಷನ್ ನಲ್ಲಿ ಭಾರೀ ಗಾತ್ರದ ಹೂವಿನ ಹಾರವನ್ನು ಕಾರ್ಯಕರ್ತರು ಇನಾಯತ್ ಅಲಿ ಮತ್ತು ಅಭ್ಯರ್ಥಿ ಪದ್ಮರಾಜ್ ಅವರಿಗೆ ಹಾಕಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತಾಡಿ, "ಬಿಜೆಪಿ ಸರಕಾರ ದೇಶದ ಜನರಿಗೆ ಚೊಂಬು ಅಭಿವೃದ್ಧಿಯ ಆಡಳಿತ ನೀಡಿಲ್ಲ. ಬದಲಿಗೆ ಪ್ರಧಾನಿ ಮೋದಿ ಸುಳ್ಳುಗಳ ಮೇಲೆ ಸುಳ್ಳನ್ನು ಹೇಳುತ್ತಾ ಜನರ ಕೈಗೆ ದೊಡ್ಡ ಚೊಂಬು ನೀಡಿದ್ದಾರೆ. ಅದೇ ಅವರ ಬಲುದೊಡ್ಡ ಸಾಧನೆ. ಈ ಬಾರಿ ಪಕ್ಷದ ಎಲ್ಲ ನಾಯಕರು, ಒಮ್ಮತದಿಂದ ಪದ್ಮರಾಜ್ ರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ನಾಡಿದ್ದು ನಡೆಯುವ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಅವರನ್ನು ಗೆಲ್ಲಿಸಬೇಕು" ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, "ನಾವು ಕಳೆದ ವಿಧಾನಸಭಾ ಚುನಾವಣೆ ಅವಧಿಯಲ್ಲಿ ೫ ಗ್ಯಾರಂಟಿಯನ್ನು ಜನರಿಗೆ ನೀಡಿದ್ದೆವು. ಜನರು ನಮ್ಮ ಮೇಲೆ ವಿಶ್ವಾಸವಿರಿಸಿ ವಿಧಾನಸಭೆಗೆ ಆರಿಸಿ ಕಳುಹಿಸಿದ್ದಾರೆ. ಸರಕಾರ ರಚನೆಯಾದ ಒಂದೇ ತಿಂಗಳಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದಿದ್ದು ಕಾಂಗ್ರೆಸ್ ಸಾಧನೆ. ಬಿಜೆಪಿಗರಲ್ಲಿ ಏನು ಸಾಧನೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರು ಮಾತನಾಡಿ, "ಜನರನ್ನು ಧರ್ಮದ ಹೆಸರಲ್ಲಿ ಒಡೆದಿರುವ ಪ್ರಧಾನಿ ಮೋದಿ ಜನರಿಗಾಗಿ ಏನನ್ನೂ ಮಾಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದಿನ ಸಂಸದರು ಅಭಿವೃದ್ಧಿಯಲ್ಲಿ ಹಿಂದುಳಿದರು. ಮತೀಯ ಗಲಭೆ, ಕೋಮು ದಳ್ಳುರಿಯಿಂದಾಗಿ ಜಿಲ್ಲೆಯಲ್ಲಿ ಸಾಮಾಜಿಕ ಶಾಂತಿಗೆ ಭಂಗವುಂಟಾಯಿತು. ಈ ಬಾರಿ ಜನಸಾಮಾನ್ಯರ ಸೇವೆ ಮಾಡಲೆಂದು ನನ್ನನ್ನು ಪಕ್ಷ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸಿದೆ. ನಿಮ್ಮ ಸೇವೆಗೆ ನಾನು ಸದಾ ಬದ್ಧನಾಗಿರುತ್ತೇನೆ" ಎಂದರು.
ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಪೃಥ್ವಿರಾಜ್, ಗಿರೀಶ್ ಆಳ್ವ, ಮಾಜಿ ಶಾಸಕ ಜೆ. ಆರ್. ಲೋಬೊ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಯುಪಿ ಇಬ್ರಾಹಿಂ, ಎಂ.ಜಿ. ಹೆಗಡೆ ಮೊದಲಾದವರಿದ್ದರು.