Mangalore: ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಡಾ. ನರಸಿಂಹಮೂರ್ತಿ
ಮಂಗಳೂರು: ಸಮುದಾಯ ಮಂಗಳೂರು ವತಿಯಿಂದ ಭಗತ್ ಸಿಂಗ್ ಟ್ರಸ್ಟ್ ಪಂಜಿಮೊಗರು, ಶಾಲಾ ಅಭಿವೃದ್ಧಿ ಸಮಿತಿ ಪಂಜಿಮೊಗರು ಇದರ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರು ಇಲ್ಲಿ ಎಪ್ರೀಲ್ 13 ರಿಂದ ಎ.17 ರ ವರೆಗೆ ಚಿಣ್ಣರ ಸಂಭ್ರಮ ಬೇಸಿಗೆ ರಜಾ ಶಿಬಿರವು ನಡೆಯಿತು.
ಈ ಶಿಬಿರದ ಸಮಾರೋಪದಲ್ಲಿ ನಿವೃತ್ತ ಉಪನ್ಯಾಸಕ ಡಾ. ನರಸಿಂಹಮೂರ್ತಿ ಮಾತನಾಡಿ, ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಶಾಲೆಗಳು ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ತಾನವಾಗಬೇಕಿತ್ತು, ಆದರೆ ಇಂದಿನ ಶಿಕ್ಷನವು ಬರಿಯ ಅಂಕಗಳಿಗೆ ಮಾತ್ರ ಸೀಮಿತವಾಗಿದೆ.ಬದುಕು ಬೆಳಗಿಸುವ ಪಠ್ಯದ ಜೊತೆಗೆ ಪ್ರತಿಭೆಗಳನ್ನು ಬೆಳಗಿಸುವ ಪಠ್ಯೇತರ ಚಟುವಟಿಕೆಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಬೇಸಿಗೆ ರಜಾ ಶಿಬಿರಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮಕ್ಕಳ ಪೋಷಕರು ಕೂಡ ಮಕ್ಕಳ ಒಳಗಿರುವ ಕಲೆಯನ್ನು ಗುರುತಿಸುವ ಕೆಲಸ ಮಾಡಬೇಕು. ಇಂತಹ ವಿಭಿನ್ನ ಪಠ್ಯತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಹೇಳಿದರು.
ಐದು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರವೀಣ್ ವಿಸ್ಮಯ, ವಿದ್ದು ಉಚ್ಚಿಲ, ಮೇಘನ ಕುಂದಾಪುರ, ಶಿವರಾಂ ಕಾಲ್ಮಡ್ಕ, ಜುಬೇರ್, ದಿವಾಕರ್ ಕಟೀಲ್ ಮೊದಲಾದವರು ಪೇಪರ್ ಕ್ರಾಫ್ಟ್, ರಂಗ ಸಂಗೀತ, ನಾಟಕ ಕಲೆ, ಮಾಸ್ಕ್ ರಚನೆ ಮೊದಲಾದವುಗಳ ಕುರಿತು ಮಕ್ಕಳಿಗೆ ತರಗತಿಯನ್ನು ನೀಡಿದರು.
ಈ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮುದಾಯ ಮಂಗಳೂರು ಅಧ್ಯಕ್ಷ ದಯಾನಂದ ಶೆಟ್ಟಿ ಇವರು ವಹಿಸಿದ್ದು, ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು, ಹಿರಿಯ ವಕೀಲ ಶ್ರೀಧರ ಪೂಜಾರಿ, ಭಗತ್ ಸಿಂಗ್ ಟ್ರಸ್ಟ್‌ನ ಕಾರ್ಯದರ್ಶಿ ಅನಿಲ್ ಡಿಸೋಜ, ಸ್ಟ್ಯಾಂಡಪ್ ಕಾಮಿಡಿಯನ್ ಪ್ರಶಾಂತ್ ಅಣ್ಣಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.