Ujire: ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಎಸ್ಪರೇಂಜಾ ಫೆಸ್ಟ್

Ujire: ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಎಸ್ಪರೇಂಜಾ ಫೆಸ್ಟ್

ಎಚ್ಚರದೊಂದಿಗಿನ ಆಶಾವಾದ ಮುನ್ನಡೆಗೆ ಪ್ರೇರಕ: ಡಾ. ವಿಷ್ಣುಮೂರ್ತಿ ಪ್ರಭು 


ಉಜಿರೆ: ಭವಿಷ್ಯದ ಕುರಿತ ಎಚ್ಚರ ಮತ್ತು ಆಶಾವಾದದ ಚಿಂತನೆಯಿಂದ ಬದುಕಿನ ಮುನ್ನಡೆಗೆ ಪ್ರೇರಣೆ ದೊರಕುತ್ತದೆ ಎಂದು ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿಷ್ಣುಮೂರ್ತಿ ಪ್ರಭು ಹೇಳಿದರು.

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನ ವಿಭಾಗವು ಮಂಗಳವಾರ ಆಯೋಜಿಸಿದ ಒಂದು ದಿನದ ಅಂತರ ಕಾಲೇಜು ಫೆಸ್ಟ್ ‘ಎಸ್ಪರೇಂಜಾ’ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬದುಕಿನಲ್ಲಿ ಸೋಲು, ಗೆಲುವು ಸಹಜವಾದದ್ದು. ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಸ್ಪರ್ಧಾತ್ಮಕ ಗುಣದಿಂದ ಮುಂದುವರೆಯಬೇಕು. ಭವಿಷ್ಯದ ಸವಾಲುಗಳ ಯೋಚನೆಯಲ್ಲಿ ನಾವು ವರ್ತಮಾನವನ್ನು ಮರೆಯುತ್ತಿದ್ದೇವೆ. ಹಾಗೆ ಮಾಡದೆ ಬದುಕಿನ ಪ್ರಕ್ರಿಯೆಗಳನ್ನು ಮುಕ್ತವಾಗಿ ಅನುಭವಿಸಬೇಕು ಎಂದರು.

ಈ ಕಾಲಘಟ್ಟದಲ್ಲಿ ಪದವಿಯ ಜೊತೆಗೆ ವೃತ್ತಿ ಕೌಶಲ್ಯಗಳನ್ನು ಗಳಿಸಿಕೊಂಡು ಯಶಸ್ಸು ಸಾಧಿಸಲು ಸಾಧ್ಯ. ಆದ್ದರಿಂದ ಭರವಸೆ ಕಳೆದುಕೊಳ್ಳದೇ ನಿರಂತರ ಪ್ರಯತ್ನಗಳೊಂದಿಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಬಿ.ಎ. ಕುಮಾರ ಹೆಗ್ಡೆ ಉದ್ಘಾಟಿಸಿದರು. ಜೀವನದ ಕುರಿತಾಗಿ ನಾವು ಹೊಂದಿರುವ ಭರವಸೆಗಳು ಉತ್ಸಾಹ, ಸಂತೋಷ ಹಾಗೂ ಧನಾತ್ಮಕತೆಯಿಂದ ಮುನ್ನಡೆಯಲು ನೆರವಾಗುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡಗಳನ್ನು ನಿಯಂತ್ರಿಸಲು ಭವಿಷ್ಯದ ಕುರಿತಾಗಿ ಆಶಾವಾದಿಗಳಾಗಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. ಮಾತನಾಡಿದರು. ಅಂತರ ಕಾಲೇಜು ಫೆಸ್ಟ್‌ಗಳು ವಿದ್ಯಾರ್ಥಿಗಳಿಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೊಡನೆ ಬೆರೆಯುವ ಅವಕಾಶ ಮಾಡಿಕೊಡುತ್ತವೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಭಾಗದ ಸಾಧಕ ವಿದ್ಯಾರ್ಥಿಗಳಾದ ಸಮ್ಯಕ್ತ್ ಜೈನ್ ಹಾಗೂ ಹರ್ಷಿನಿ ಸಿಂಗ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿ ಸಂಯೋಜಕಿ ಆಯಿಷತ್ ಅರ್ಷಾನ ಉಪಸ್ಥಿತರಿದ್ದರು. ಹರ್ಷಿನಿ ಸಿಂಗ್ ನಿರೂಪಿಸಿದರು. ವಿಭಾಗ ಮುಖ್ಯಸ್ಥೆ ಡಾ. ಮಂಜುಶ್ರೀ .ಆರ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅತೀರಾ, ಅನಿಲ್ ಮತ್ತು ಶ್ವೇತಾ ಪ್ರಾರ್ಥಿಸಿದರು. ಪ್ರಾಧ್ಯಾಪಕ ವಿಘ್ನೇಶ್ ಐತಾಳ್ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article