Ujire: ಎಸ್.ಡಿ.ಎಂ ಕಾಲೇಜಿನಲ್ಲಿ ಶಿಕ್ಷಕ-ಪೋಷಕರ ಸಭೆ
ಸ್ನೇಹಭಾವದಿಂದ ಮಕ್ಕಳಿಗೆ ಭರವಸೆಯ ಶಕ್ತಿ: ಅನುರಾಧ ಕೆ ರಾವ್
ಉಜಿರೆ: ಪೋಷಕರು ಗೆಳೆಯರಾಗಿ ಮಕ್ಕಳಲ್ಲಿ ಭರವಸೆ ಮೂಡಿಸಿ ಶಕ್ತಿ ತುಂಬಬೇಕು ಎಂದು ವಾಣಿ ಪಿ.ಯು. ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಅನುರಾಧ ಕೆ ರಾವ್ ಹೇಳಿದರು.
ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಮಂಗಳವಾರ ನಡೆದ ಶಿಕ್ಷಕ-ಪೋಷಕ ಸಂಘದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಕ್ಕಳು ಸಮಾಜದಲ್ಲಿ ಸತ್ಪ್ರಜೆಯಾಗಾಬೇಕಾದರೆ ಪೋಷಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಎನ್ನುವುದು ಮನೆಯಿಂದಲೇ ಕಲಿಸಬೇಕು. ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ, ಜ್ಣಾನ ಶಕ್ತಿ ಒಂದಾದಾಗ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾದ್ಯ. ಪೋಷಕರಾದವರು ಗೆಳೆಯ-ಗೆಳತಿಯರಂತಿದ್ದು ಅಂತಹ ವಾತಾವರಣವನ್ನು ಮಕ್ಕಳಿಗೆ ಕಲ್ಪಿಸಿಕೊಡಬೇಕು ಎಂದರು.
ದೇಶದ ಭವಿಷ್ಯ, ಮನೆ ಬೆಳಗುವ ದೀಪವಾಗಿರುವ ಮಕ್ಕಳಿಗೆ ಶಿಕ್ಷಕರು ಕೇವಲ ಶಿಕ್ಷಣವನ್ನು ನೀಡುವುದಲ್ಲದೇ ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಇಂದಿನ ದಿನಗಳಲ್ಲಿ ಸಾಧನೆಗೆ ವಿಫುಲ ಅವಕಾಶವಿದೆ. ಆ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಬೆಂಬಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಕಾಲೇಜಿನಲ್ಲಿ ಅಳವಡಿಸಿಕೊಂಡಿರುವ ಸೌಕರ್ಯಗಳಿಂದ ಶಿಕ್ಷಣದಲ್ಲಿ ಸುಧಾರಣೆಗಳಾಗಿವೆ. ವಿದ್ಯಾರ್ಥಿಗಳು ಗುಣಮಟ್ಟದ ಪ್ರಯತ್ನದ ಜೊತೆಗೆ ದೇಶದ ಉತ್ತಮ ನಾಕರಿಕರಾಗುವಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪಾಲಕರು ಕಾಲೇಜಿನ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಉಪ ಪ್ರಾಂಶುಪಾಲ ಡಾ. ಎಸ್.ಎನ್. ಕಾಕತ್ಕರ್, ಕಲಾ ವಿಭಾಗದ ಡೀನ್ ಡಾ. ಶ್ರೀಧರ್ ಭಟ್, ಡಾ. ಶಲೀಪ್, ಪರೀಕ್ಷಾಂಗ ಕುಲಸಚಿವೆ ಡಾ. ನಂದ, ವಾಣಿಜ್ಯ ವಿಭಾಗದ ಡೀನ್ ಡಾ. ಶಕುಂತಲಾ ಉಪಸ್ಥಿತರಿದ್ದರು.
ಜೈವಿಕ ತಂತ್ರಜ್ಣಾನ ವಿಭಾಗದ ಮುಖ್ಯಸ್ಥ ಅಭಿಜಿತ್ ಬಡಿಗೇರ್ ಸ್ವಾಗತಿಸಿ, ಗಣಕ ಯಂತ್ರ ವಿಜ್ನಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವ್ಯ ಯಾದವ್ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಕಾರ್ಯಕ್ರಮ ನಿರೂಪಿಸಿದರು.
